ವಿಷಯಕ್ಕೆ ಹೋಗು

ಪುಟ:ಶತಕ ಸಂಪುಟ.pdf/೧೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೬೦
ಶತಕ ಸಂಪುಟ


ಸುಚರಿತ್ರರ್‌ ಸಲೆ ಕೀರ್ತಿಗೋಸುಗ ಮಹಾಯತ್ನಂಗಳಿಂ ಕೇಳಿಸೂ
ರಿಚಯಕ್ಕಾದರದಿಂದೆ ಮಾನಗಳನಿತ್ತಾಚಂದ್ರ ತಾರಾರ್ಕಮಾ
ದಚಲಖ್ಯಾತಿಯನಾಳ್ದರೀಗಲಿಳೆಯೊಳ್ ತಾವೀಯರೈ ಪೋಗಲಾ
ವಚನಕ್ಕೇನು ದರಿದ್ರವೈ ಹರಹರಾ ಶ್ರೀ ಚೆನ್ನಸೋಮೇಶ್ವರಾ‖ ೧೦೦ ‖

ಹಿಡಿಯೊಳ್ ತುಂಬಿರೆ ಪಂಕ ಮೇಲುದೊಳೆಯಲ್ ತಾಂ ಶುದ್ಧಮೇನಪ್ಪುದೇ
ಕಡುಪಾಪಂ ಬಲುಮೀಯಲಾತ ಶುಚಿಯೇ ಕಾಕಾಳಿಯೇಂ ಮೀಯದೇ
ಗುಡಪಾನಂಗಳೊಳದ್ದೆ ಕೈಸೊರೆ ತಾಂ ಸ್ವಾದಪ್ಪುದೇ ಲೋಕದೊಳ್
ಮಡಿಯೇ ನಿರ್ಮಲ ಚಿತ್ತವೈ ಹರಹರಾ ಶ್ರೀ ಚೆನ್ನಸೋಮೇಶ್ವರಾ ‖ ೧೦೧ ‖

ರಚನಂಗೆಯ್ಯದೆ ಧರ್ಮಕೀರ್ತಿಯೆರಡಂ ಸದ್ಧರ್ಮಮಂ ಪಾರದಾ
ನಿಚಯಕ್ಕಿಕ್ಕದೆ ತತ್ವ ಕೇಳಿ ಜಗಮೆಲ್ಲಂ ಬೊಮ್ಮವೆಂದೆನ್ನದೇ
ಉಚಿತಾಲೋಚನೆಯಿಂದೆ ತನ್ನ ನಿಜವಂ ತಾಂ ಕಾಣದೇ ವಾದಿಪಾ
ವಚನಬ್ರಹ್ಮದೆ ಮುಕ್ತಿಯೇ ಹರಹರಾ ಶ್ರೀ ಚೆನ್ನಸೋಮೇಶ್ವರಾ‖ ೧೦೨


ಸಚರಸ್ಥಾವರಕೆಲ್ಲ ಸರ್ವಸುಖದುಃಖಂಗಳ್ ಸಮಾನಂಗಳೆಂ-
ದಚಲಾನಂದದಿ ತನ್ನೊಳನ್ಯರೆಣಿಸಲ್ ಸುಜ್ಞಾನಿಗಳ್ ಕಿಚ್ಚಿನೊಳ್
ಶುಚಿಯೊಳ್ ಪಾದವನಿಟ್ಟು ತೋರ್ಪತೆರದೊಳ್ ತಾನಾಗದೇ ವಾದಿಪಾ
ವಚನಬ್ರಹ್ಮದೆ ಮುಕ್ತಿಯೇ ಹರಹರಾ ಶ್ರೀ ಚೆನ್ನಸೋಮೇಶ್ವರಾ‖ ೧೦೩


ಶುಚಿ ತಾನಾಗದೆ ಸರ್ವಶಾಸ್ತ್ರನಿಪುಣಂ ತಾನಾಗದೇ ಕಾಮಮಂ
ಪಚನಂಗೆಯ್ಯದೆ ಕ್ರೋಧಮಂ ಬಿಡದೆ ಲೋಭಚ್ಛೇದಮಂ ಮಾಡದೇ
ರಚನಾಮೋಹವನಗ್ಗಿ ಮಗ್ಗಿ ಮದಮಂ ಮಾತ್ಸರ್ಯಮಂ ನೀಗದೇ
ವಚನಬ್ರಹ್ಮದೆ ಮುಕ್ತಿಯೇ ಹರಹರಾ ಶ್ರೀ ಚೆನ್ನಸೋಮೇಶ್ವರಾ‖ ೧೦೪