ಪುಟ:ಶತಕ ಸಂಪುಟ.pdf/೧೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೬೪

ಶತಕ ಸಂಪುಟ


ಧರಣಿಯಮರರ್ಗೀವ ಕಾಂಚನದ ನಾಮದಲಿ
ಕರಸಿಕೊಳುತಿರ್ಪ ದಿಗ್ವಸನ ಸತಿಯಳ ಪಿತನ
ಸಿರಗಡಿದನವ್ವೆಯಣುಗನ ಜಠರವನು ಸುತ್ತಿಕೊಂಡಿರ್ಪನಾರಾತಿಯ
ಪರಮಸತ್ವಕೆ ಸೋತು ಸುಧೆಯನಿತ್ತನ ಸುತನ
ವರಸತಿಯಳಗ್ರಜನ ಪಟ್ಟದರಸಿಯ ಸಹೋ
ದರನ ಜಾಮಾತಹರ ನಿಜಲಿಂಗ ಭವಭಂಗ ಶರಣಜನವರದ ಜಯತು ‖ ೯ ‖

ಸವಿರುಚಿಯ ತೋರುತಿರ್ಪವು ಸಪ್ತವಿರುತಿಹನ
ತವೆ ಸಖನ ವಾಹನವ ಧರಿಸಿದನ ಪಿತನ ವಸ
ನವ ಮಾಡಿಕೊಂಡಿಹಳ ತಸ್ಕರನಯನನ ತದ್ವರ್ಣಗರ್ಭನ ತಮ್ಮನ
ವಿವರವಾಗಿರುತಿರ್ಪ ಧ್ವಜದಗಂಧಿಯಪತಿಯ
ಯುವತಿಯಳ ತನುಭವ ಪೌತ್ರಗೊಲಿದೊಲಿದು ಬಾ
ಣವನಿತ್ತು ರಕ್ಷಿಸಿದ ನಿಜಲಿಂಗ ಭವಭಂಗ ಶರಣಜನವರದ ಜಯತು ‖ ೧೦ ‖
ಕಡುಚಲುವೆ ಪಾರ್ವತಿಯ ತೊಡೆಯಡಿಯೊಳಿಂಬಿಟ್ಟು
ನಿಡುಗುರುಳ ನೇವರಿಸಿ ಕುಡಿಪುರ್ಬುಗಳ ತೀಡಿ
ಇಡಿಕಿರಿದ ನುಣ್ಗಲ್ಲವಿಡಿದು ನುಣ್ಪಿಡುತ ಪೊಂಗೊಡಮೊಲೆಯೊಳುಗುರನಿಡುತ
ಮುಡಿಸಿ ಪೂಸರಗಳನು ಮುಡಿವಿಡಿದು ಚೆಂದುಟಿಯ
ಬಿಡದೆ ಚುಂಬನಗೈವುತಡಿಗಡಿಗೆ ಹಾಯೆನುತ
ಬೆಡಗಿನಿಂದೊಡವೆರೆದ ನಿಜಲಿಂಗ ಭವಭಂಗ ಶರಣಜನವರದ ಜಯತು‖ ೧೧


ಗಳರವದಿ ಚುಂಬನಂಗಳ ರವದಿಯಂಗುಲಂ
ಗಳ ರವದಿ ಕಂಕಣಂಗಳ ರವದಿ ಕಾಲ್ಗೆಜ್ಜೆ
ಗಳ ರವದಿ ತಾಡನಂಗಳ ರವದಿ ಹಾರಹೀರಾವಳಿಯ ರವದಿಂದಲಿ
ಹೊಳೆಹೊಳೆವ ಶಕುನಿಮಂಚದ ರವದಿ ಜಾಣ್ವಾತು
ಗಳನಾಡುತಿರ್ಪ ರವದಿಂದೆ ಗಿರಿರಾಜಸುತೆ
ಯೊಳುಸುರುತ ಸವಿಗರೆವ ನಿಜಲಿಂಗ ಭವಭಂಗ ಶರಣಜನವರದ ಜಯತು