ಪುಟ:ಶತಕ ಸಂಪುಟ.pdf/೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮಂಗ-ನಾಯಿ-ಹಂದಿಯಂತೆ ವರ್ತಿಸುತ್ತದೆ. ಕಾಮ, ಕ್ರೋಧ, ಲೋಭ, ಮೋಹ,
ಮದ, ಮತ್ಸರಗಳೆಂಬ ಅರಿಷಡ್ವರ್ಗಗಳು ಮುತ್ತಿಗೆ ಹಾಕುತ್ತವೆ. ಅವುಗಳ ಉಪಟಳಕ್ಕೆ
ಸಿಕ್ಕಿ ಬಳಲುತ್ತದೆ. ಮನ, ಬುದ್ಧಿ, ಅಹಂಕಾರ, ಚಿತ್ತ ವಿಕಾರತೆಗಳಿಂದ ತೊಳಲುತ್ತದೆ.
ವ್ಯವಸಾಯ, ವ್ಯವಹಾರ ಇತ್ಯಾದಿ ನಾನಾ ವೃತ್ತಿಗಳನ್ನು ಆಶ್ರಯಿಸಿ ದುಡಿದು,
ಅನ್ಯರ ಸೇವೆ ಮಾಡಿ, ದೈನ್ಯದ ಬದುಕು ಸಾಗಿಸಿ ದಣಿಯುತ್ತದೆ. ಸಂಸಾರದ
ಬಂಧನಕ್ಕೊಳಗಾಗಿ ಮಡದಿ-ಮಕ್ಕಳನ್ನು ಸಲಹುವಲ್ಲಿ ಹೋರಾಟ ನಡೆಸುತ್ತದೆ.
ನಾನಾ ರೋಗಗಳಿಗೆ ತುತ್ತಾಗಿ ನರಳುತ್ತದೆ. ಇವೆಲ್ಲವುಗಳಿಂದ ಬಿಡುಗಡೆಹೊಂದಲು
ಕೊನೆಗೆ ದೇವರ ಮೊರೆಹೋಗುತ್ತದೆ.
ಶಿವನನ್ನು ಅನನ್ಯ ಭಕ್ತಿಯಿಂದ ಅರ್ಚಿಸಿ, ಪೂಜಿಸಿ, ಧ್ಯಾನಿಸಿ, ಪ್ರಾರ್ಥಿಸಿ,
'ನಿಮಗೆನ್ನಂ ಮಾರುಗೊಟ್ಟೆಂ ಪುರಹರ, ನಿಮಗೆನ್ನಂ ಸದಾ ತೊಳ್ತುಗೊಟ್ಟೆಂ'
ಎಂದು ಸರ್ವಾರ್ಪಣಭಾವವನ್ನು ತೋರುತ್ತದೆ. 'ಬಿಡೆನೀಶಾ ನಿಮ್ಮ ಪಾದಾಬ್ಜಮನೆಲೆಲೆ
ಬಿಡೆಂ ಸೀಳ್ದೊಡಂ ಪೋಳ್ದೊಡಂ ಪೊಯ್ದೊಡಂ' ಎಂದು ವೀರನಿಷ್ಠೆಯನ್ನು
ಪ್ರಕಟಿಸುತ್ತದೆ. 'ಕರ್ತಾರಂ ನೀನೆ, ಭರ್ತಾರಂ ನೀನೆ, ಹರ್ತಾರಂ ನೀನೆ,
ಕೂರ್ತಿ೦ತೋರಂತೆ ಪಂಪಾಪುರದರಸ ವಿರೂಪಾಕ್ಷ ರಕ್ಷಿಪ್ಪುದೆನ್ನಂ' ಎಂದು
ವೀರಭಕ್ತಿಯನ್ನು ಮೆರೆಯುತ್ತದೆ. ಈಶಭಕ್ತಿಯ ವಿಭಿನ್ನ ಪರಿಗಳು ಪಂಪಾಶತಕದಲ್ಲಿ
ಮುಂದುವರಿಯುತ್ತವೆ; ಕೊನೆಗೆ ಶಿವಸಾಕ್ಷಾತ್ಕಾರ-ಶಿವಸಾಯುಜ್ಯದ ಸುಖ
ಪ್ರಾಪ್ತವಾಗುತ್ತದೆ.
ಹೀಗೆ ರಕ್ಷಾಶತಕದಲ್ಲಿ-ಅಪರಿಪೂರ್ಣನೂ ಅಪಕ್ವನೂ ಆದ ಆತ್ಮ
ನಾನಾಜನ್ಮಗಳಲ್ಲಿ ಹುಟ್ಟಿ-ಸತ್ತು ಮಾನವಜನ್ಮಕ್ಕೆ ಬಂದು, ಅಜ್ಞಾನವಶದಿಂದ ಸಂಸಾರ
ತಾಪತ್ರಯ-ಮನೋವಿಕಾರತೆಯಲ್ಲಿ ಸಿಕ್ಕು ನರಳಿ, ಕೊನೆಗೆ ಅರಿವಿನ ಕಣ್ಣು ತೆರೆದು
ಪರಶಿವನಿಗೆ ಮೊರೆಹೋಗಿ, ತನ್ನ ಕೊರತೆಯನ್ನು ನೀಗಿಕೊಂಡು ಪರಿಪೂರ್ಣನೂ,
ಪರಿಪಕ್ವನೂ ಆಗುವ ಹಂಬಲವನ್ನು ತೋರುವ ಬಗೆಯನ್ನು ತುಂಬ
ಪರಿಣಾಮಕಾರಿಯಾಗಿ ಬಣ್ಣಿಸಲಾಗಿದೆ. ಇದು ಒಂದು ರೀತಿಯಲ್ಲಿ ಆತ್ಮಶೋಧನೆ
ಮತ್ತು ಆತ್ಮಪರಿಶೀಲನೆಯ ಅತ್ಯುತ್ತಮ ಮಾರ್ಗಸೂಚಿಯೆನಿಸಿದೆ. ಹಸನಾದ ಬದುಕಿಗೆ
ದಾರಿದೀಪವಾಗಿದೆ. ಕವಿ ಇಲ್ಲಿ ತನ್ನ ಬದುಕನ್ನೇ ಲಕ್ಷ್ಯವಾಗಿರಿಸಿಕೊಂಡು ಇಡೀ
ಮಾನವ ಬದುಕಿಗೇ ಅನ್ವಯಿಸುವಂತೆ ಹೇಳಿದ ವಿಧಾನ ವಿಶೇಷವೆನಿಸಿದೆ. ಕವಿಯ
ಸ್ವಾನುಭವ ಮತ್ತು ಲೋಕಾನುಭವ ಎರಡೂ ಇಲ್ಲಿ ಸಮಭಾವದಿಂದ ಬೆರೆತಿವೆ.
'ಪಾರಮಾರ್ಥ' ಮತ್ತು 'ಸಮ್ಯಕ್ ಪರತರ'ವನ್ನು ತಿಳಿಸುವುದೇ ಈ ಕೃತಿಯ
ಪರಮ ಗುರಿಯಾಗಿದೆ.

xvi