'ಪಂಪಾಶತಕ'ದಲ್ಲಿ ೧೦೩ ವೃತ್ತಗಳಿವೆ. ಅವು ಎಲ್ಲವೂ ಖ್ಯಾತಕರ್ನಾಟಕ
ವೃತ್ತಗಳೇ ಆಗಿವೆ. ಅವುಗಳಲ್ಲಿ ೩೨ ಚಂಪಕಮಾಲೆ, ೧೩ ಉತ್ಪಲಮಾಲೆ, ೩೨
ಮತ್ತೇಭವಿಕ್ತೀಡಿತ, ೮ ಶಾರ್ದೂಲವಿಕ್ರೀಡಿತ, ೨ ಸ್ರಗ್ಧರಾ ಮತ್ತು ೧೬ ಮಹಾಸ್ರಗ್ಧರಾ
ವೃತ್ತಗಳು ಸಮಾವೇಶಗೊಂಡಿವೆ. ಈ ವೃತ್ತಗಳು ಹೆಚ್ಚಾಗಿ 'ಹಂಪೆಯಾಳ್ದನ' ಮತ್ತು
'ವಿರೂಪಾಕ್ಷಲಿಂಗ' ಎಂದು, ಕ್ವಚಿತ್ತಾಗಿ 'ಪಂಪಾಶೀಪುರಾಧೀಶ್ವರ', 'ವಿರೂಪಾಕ್ಷ,'
'ಹಂಪೆಯಲಿಂಗ', 'ಹಂಪೆಯ ದೇವ' ' ಹಂಪೆಯದೇವರಾಯ ' ಎಂದು
ಮುಕ್ತಾಯಗೊಳ್ಳುತ್ತವೆ.
ಮೊದಲಪದ್ಯ ವಿರೂಪಾಕ್ಷನ ಸ್ತುತಿಯಿಂದ ಆರಂಭವಾಗುತ್ತದೆ. ಅದು
ಮುಂದೆ ಎಲ್ಲ ಪದ್ಯಗಳಲ್ಲಿಯೂ ವ್ಯಾಪಿಸುತ್ತದೆ. ಸಾಕಾರ ಶಿವನನ್ನು
ವಿರೂಪಾಕ್ಷನಾಮದಿಂದ ಬಗೆಬಗೆಯಾಗಿ ಬಣ್ಣಿಸಲಾಗಿದೆ. ವಿರೂಪಾಕ್ಷನೊಬ್ಬನೆದೇವ ;
ಆತನ ಪೂಜೆ - ಸ್ತುತಿ - ಧ್ಯಾನ ಒಂದೇ ಕಾರ್ಯ. ಆತನೊಬ್ಬನೆ ಎಲ್ಲರ ಸಂಸಾರಬಂಧನ
ಬಿಡಿಸಿ ನಿಜಸುಖವನ್ನು ನೀಡುವವನು. ಅದಕ್ಕಾಗಿ ಆತನಿಗಾಗಿ ಕವಿ ತನ್ನ ನಾಲಗೆಯನ್ನು
ಮಾರಿಕೊಂಡಿದ್ದಾನೆ, ಮೀಸಲಾಗಿಟ್ಟಿದ್ದಾನೆ. ಇಲ್ಲಿ ಆತನ ಉತ್ಕಟ ಭಕ್ತಿ - ನಿಷ್ಠೆಗಳು
ಸುಪ್ರಕಟವಾಗಿವೆ. ಏತನ್ಮಧ್ಯೆ - ಪೂಜೆಯ ವಿಧಾನ, ಸದ್ಭಕ್ತನ ಲಕ್ಷಣ, ಶಿವನ ಮಹಿಮೆ,
ಅವನ ಭಕ್ತಿಯಿಂದ ಸಾಯುಜ್ಯ ಪದವಿ ಪಡೆದ ಪುರಾತನ ಭಕ್ತರ ಸ್ಮರಣೆ,
ಮಾನವಜನ್ಮದ ಹಿರಿಮೆ, ಪಾಪ - ಪುಣ್ಯಗಳ ಪರಿಕಲ್ಪನೆ, ಶಿವಸೇವೆಯ ಮಹತಿ-
ಮೊದಲಾದ ವಿಷಯಗಳ ವಿವರಣೆ ನೀಡುತ್ತಾನೆ. ಒಟ್ಟಿನಲ್ಲಿ ಇದೊಂದು
' ಶಿವಮಹಿಮಾಶತಕ ' ವಾಗಿ ಮನಸ್ಸನ್ನು ಸೆರೆಹಿಡಿಯುತ್ತದೆ.
ಇಲ್ಲಿ ಮುಖ್ಯವಾಗಿ -
೧. ಕೆಡುವ ಒಡಲಿನ ಸಾರ್ಥಕತೆಯಾಗುವುದು ಏತರಿಂದ?
೨. ಭಗವಂತನ ದರ್ಶನವಾಗುವುದು ಹೇಗೆ ?
೩. ಭೂಲೋಕದಲ್ಲಿ ಭಗವಂತನನ್ನು ಸಾಕ್ಷಾತ್ಕರಿಸಿಕೊಂಡ ಮಹಾನುಭಾವರ
ಬದುಕು ಎಂತಹದು?
ಎಂಬ ಮೂರು ಪ್ರಶ್ನೆಗಳನ್ನು ಹಾಕಿಕೊಂಡು ಅದಕ್ಕೆ ಉತ್ತರವನ್ನು ನೀಡುತ್ತ
ಸಾಗಲಾಗಿದೆ.
ಕೊನೆಯ ವೃತ್ತದಲ್ಲಿ ಶತಕದ ಆಶಯವನ್ನು ತಿಳಿಸುತ್ತ - " ಪುಣ್ಯಮಾರ್ಗಮಿದು,
ಸಾತ್ವಿಕ ಲಕ್ಷಣಮಿದು, ಆದ್ಯರನ್ವಯಮಿದು, ಭಕ್ತಿರಸಪೂರವಿದು, ಉತ್ತಮ
ಶೀಲಭಕ್ತರಾಶ್ರಯಮಿದು, ಇದರಿಂದ ಸಕಲ ಇಷ್ಟಾರ್ಥಫಲಗಳು ಪ್ರಾಪ್ತವಾಗುತ್ತವೆ "
ಎಂದು ಹೇಳುತ್ತಾನೆ.
xvii