ಪುಟ:ಶತಕ ಸಂಪುಟ.pdf/೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಹಸ್ತಪ್ರತಿಯ ಕೊನೆಯಲ್ಲಿ " ವರಸಮ್ಯಕ್ತ್ವ ಸುಧರ್ಮ ಜೈನಮತದೊಳ್ ತಾಂ
ಪುಟ್ಟಿಯೂ ದೀಕ್ಷೆಯಂ। ಧರಿಸೀ ಸನ್ನುತ ಕಾವ್ಯಶಾಸ್ತ್ರಗಳನಾ ನಿರ್ಮಾಣಮಂ
ಮಾಡುತಂ। ವರರತ್ನಾಕರಯೋಗಿಯೆಂದು ನಿರತಂ ವೈರಾಗ್ಯ ಬಂದೇರಲಾಂ|
ಹರದೀಕ್ಷಾವ್ರತನಾದನೈ ಹರಹರಾ ಶ್ರೀ ಚೆನ್ನಸೋಮೇಶ್ವರಾ " ಎಂಬ ಪದ್ಯ ಇರುವುದನ್ನು
ಗಮನಿಸಿ, ಈ ಕೃತಿಯ ಕರ್ತೃ ರತ್ನಾಕರವರ್ಣಿ ಇರಬೇಕು ಎಂದು
ಅಭಿಪ್ರಾಯಪಟ್ಟಿದ್ದರು.
ಪಂ. ಬಿ. ಶಿವಮೂರ್ತಿಶಾಸ್ತ್ರಿ ಅವರು ಈ ಎರಡೂ ಅಭಿಪ್ರಾಯಗಳನ್ನು
ಗಮನಿಸಿ - ಶತಕದಲ್ಲಿ ಇರುವ ಸ್ಪಷ್ಟ ಅಂಶಗಳನ್ನು ಪರಾಮರ್ಶಿಸಿ - ಕವಿಚರಿತೆಕಾರರು
ಅಂದುಕೊಂಡಂತೆ ಪಾಲ್ಕುರಿಕೆ ಸೋಮಾರಾಧ್ಯನಿಗೂ ಸೋಮೇಶ್ವರಶತಕದ ಕರ್ತೃ
ಸೋಮನಿಗೂ ಯಾವುದೇ ಸಂಬಂಧವಿಲ್ಲ. ಎಂ.ಜಿ. ನಂಜುಂಡಾರಾಧ್ಯರಿಗೆ ದೊರೆತ
ಪ್ರತಿಯಲ್ಲಿನ ಪದ್ಯ ಪ್ರಕ್ಷಿಪ್ತವಾಗಿರುವುದರಿಂದ ರತ್ನಾಕರವರ್ಣಿಗೂ -
ಸೋಮೇಶ್ವರಶತಕಕ್ಕೂ ಯಾವುದೇ ಸಂಬಂಧವಿಲ್ಲ - ಎಂದು ಸ್ಪಷ್ಟೋಕ್ತಿಗಳಿಂದ
ನಿರಾಕರಿಸಿ, ಪುಲಿಗೆರೆಯ ಸೋಮನೇ ಇದರ ಕರ್ತೃ ಎಂದು ನಿರ್ಧರಿಸುತ್ತಾರೆ.
ಇವರ ಅಭಿಪ್ರಾಯವನ್ನು ಡಿ.ಎಲ್.ಎನ್, ರಂ.ಶ್ರೀ. ಮುಗಳಿ, ಡಾ.
ಎಂ. ಎಸ್.ಸುಂಕಾಪುರ, ಎನ್.ಎಸ್.ತಾರಾನಾಥ ಮೊದಲಾದವರು ಅನುಮೋದಿಸುತ್ತಾರೆ.
ಕವಿಯ ಕಾಲವನ್ನು ಕುರಿತಂತೆಯೂ ಭಿನ್ನಾಭಿಪ್ರಾಯಗಳು ತಲೆದೋರಿವೆ.
ಕೃತಿಯ ಶೈಲಿಯನ್ನು ಕಂಡು ಬಿ.ಶಿವಮೂರ್ತಿಶಾಸ್ತ್ರಿ, ರಂ.ಶ್ರೀ. ಮುಗಳಿ, ಇದು
೧೬ ನೆಯ ಶತಮಾನಕ್ಕಿಂತ ಈಚೆಗೆ ರಚಿತವಾದುದಿರಬೇಕೆಂದು ಊಹಿಸುತ್ತಾರೆ.
ಆದರೆ ಕೃತಿಯಲ್ಲಿಯೇ ಕಾಲಸೂಚನೆ ಇರುವುದರಿಂದ ಅದನ್ನು
ಅಲ್ಲಗಳೆಯಲಾಗುವುದಿಲ್ಲ. ಅದು ಸೂಚಿಸುವ ಕ್ರಿ.ಶ. ೧೨೯೯ ಈ ಕವಿಯ
ಕಾಲವಾಗಿರಬೇಕು. ಎಂದು ಸದ್ಯಕ್ಕೆ ಒಪ್ಪಿಕೊಳ್ಳಬೇಕಾಗುತ್ತದೆ ಎಂದು ಡಾ.
ಎಂ.ಎಸ್.ಸುಂಕಾಪುರ, ಎನ್.ಎಸ್.ತಾರಾನಾಥ ತೀರ್ಮಾನಿಸುತ್ತಾರೆ. (ಕನ್ನಡ
ಅಧ್ಯಯನ ಸಂಸ್ಥೆಯ ಕನ್ನಡ ಸಾಹಿತ್ಯ ಚರಿತ್ರೆ ಸಂ.೪, ಪು.೧೬೯೩; ೧೯೭೭).
ಕಾಲಸೂಚಕ ಪದ್ಯದ ವಿವರ ಹೀಗಿದೆ:
ಕಲಿಯುಗದಲ್ಲಿ ನಾಲ್ಕುಸಾವಿರದಾ ನಾಲ್ಕುನೂರು ವರ್ಷ ಗತಿಸಿ ಇರುವ
ವಿಕಾರಿ ನಾಮ ಸಂವತ್ಸರದಲ್ಲಿ ಕೃತಿ ಮುಕ್ತಾಯವಾಯಿತಂತೆ. ಕಣ್ಣುಪಿಳ್ಳೆಯವರ
ಜಂತ್ರಿಯ ಪ್ರಕಾರ ಕಲಿಯುಗ ಗತ ವರ್ಷ ೪೪೦೦ ರಲ್ಲಿಯೇ ವಿಕಾರಿನಾಮಸಂವತ್ಸರ
ಬರುತ್ತದೆ. ೪೪೦೦ ಗತಿಸಿದ ಮೇಲೂ ನಾಲ್ಕು ತಿಂಗಳು ವಿಕಾರಿನಾಮ
ಸಂವತ್ಸರವಿರುತ್ತದೆ. ಆ ವರ್ಷ ಮುಗಿಯುವುದು ಕ್ರಿ.ಶ. ೧೩೦೦ ಮಾರ್ಚ ೨೧

xxii