ರಂದು. ಇದರಲ್ಲಿ ೩ ತಿಂಗಳು ಕಳೆದರೆ ಕ್ರಿ. ಶ. ೧೨೯೯ ಡಿಶೆಂಬರ್ ೨೯ ನೆಯ
ದಿನಾಂಕ ಆಗುವುದು. ಕವಿಯ ಹೇಳಿಕೆಯಂತೆ ಸೋಮೇಶ್ವರ ಶತಕವು ಈ
ಕಾಲಾವಧಿಯಲ್ಲಿ ರಚಿತವಾಗಿದೆ.
ಶತಕದ ಮೊದಲ ಪದ್ಯದಲ್ಲಿ ತನ್ನ ಇಷ್ಟದೈವ ಸೋಮೇಶನನ್ನು ' ಪುಲಿಗೆರೆ
ಸೋಮೇಶ ' ಎಂದು ಕರೆದಿರುವುದರಿಂದ ' ಪುಲಿಗೆರೆ ' ಕವಿಯ ಸ್ಥಳವಾಗಿರಬೇಕು.
ಇದು ಈಗಿನ ಲಕ್ಷ್ಮೀಶ್ವರವಾಗಿದೆ.
ಕವಿಯ ಮತದ ವಿಚಾರದಲ್ಲಿಯೂ ಎರಡಭಿಪ್ರಾಯಗಳಿವೆ. ಬೆಳ್ಳಾವೆ
ವೆಂಕಟನಾರಾಯಣಪ್ಪನವರು " ಈತ ವೀರಶೈವನೆಂದು ಊಹಿಸಬಹುದಾದರೂ
ವೀರಶೈವ ಗ್ರಂಥಗಳಲ್ಲಿ ಸಾಮಾನ್ಯವಾಗಿ ದೊರೆಯದ ವಿಷ್ಣುಪರವಾದ ಕಥೆಗಳೂ
ವೀರಶೈವರು ಸಾಮಾನ್ಯವಾಗಿ ಹೇಳದ ಇತರ ಪೌರಾಣಿಕ ಕಥೆಗಳೂ ಈ ಶತಕದಲ್ಲಿ
ಅನೇಕವಾಗಿ ಕಂಡುಬರುವವು.... ಆದ್ದರಿಂದ ಈ ಕವಿಯು ಮೊದಲು
ಆರಾಧ್ಯಬ್ರಾಹ್ಮಣನಾಗಿದ್ದು, ತರುವಾಯ ವೀರಶೈವ ಮತವನ್ನು
ಅವಲಂಬಿಸಿದವನಾಗಿರಬಹುದೆ ? " ಎಂಬ ಪ್ರಶ್ನೆಯನ್ನು ಎತ್ತಿದ್ದಾರೆ. ಆದರೆ ಹೀಗೆ
ನಿರ್ಣಯಿಸಲು ತಕ್ಕ ಆಧಾರಗಳೇನೂ ಇಲ್ಲ ಎಂದು ಎನ್.ಎಸ್.ತಾರಾನಾಥ
ನಿರಾಕರಿಸಿದ್ದಾರೆ.
ಕವಿ ಪುಲಿಗೆರೆಯ ಸೋಮೇಶನನ್ನು ಆರಾಧ್ಯದೈವವೆಂದು ಸ್ವೀಕರಿಸಿ, ತನ್ನ
ಕೃತಿಗೆ ಅಂಕಿತವಾಗಿಟ್ಟುಕೊಂಡಿರುವುದರಿಂದ, ಕೃತಿಯಲ್ಲಿ ' ಶಿವನೇ ದೇವರೊಳುತ್ತಮಂ "
(ಪ.೪), " ಹರಗಿಂದುರ್ವಿಗೆ ದೈವವ ? " (ಪ.೬), " ಶಿವನಂ ಬಿಟ್ಟವ ಶಿಷ್ಟನೆ ? "
(ಪ.೨೨), " ಮೃಡನೀನಲ್ಲದದಾರು ಕಾಯ್ವರು " (ಪ.೨೮), " ಶಿವಸುಜ್ಞಾನವೆ ಯೋಗಿಗಳ
ನಯನಂ " (ಪ.೮೯) - ಎಂಬಂಥ ಶಿವಾಧಿಕ್ಯ ಸಾರುವ ಅನೇಕ ಉಲ್ಲೇಖಗಳು,
ಶಿವಶರಣರ ಕಥೆಗಳ ದೃಷ್ಟಾಂತಗಳು ದೊರಕುವುದರಿಂದ - ಈತ ವೀರಶೈವನಾಗಿದ್ದ
ಎಂಬುದು ಸ್ಪಷ್ಟವಾಗುತ್ತದೆ.
ಸೋಮೇಶ್ವರ ಶತಕ :
ಸೋಮೇಶ್ವರ ಶತಕದಲ್ಲಿ ೧೦೭ ಸಮವೃತ್ತಗಳಿವೆ. ಎಲ್ಲವೂ
ಖ್ಯಾತಕರ್ನಾಟಕಗಳು. ಆರಂಭ ಮತ್ತು ಕೊನೆಯ ವೃತ್ತಗಳು ಸ್ರಗ್ಧರಾ; ಮಧ್ಯದ
೧೦೫ ವೃತ್ತಗಳು ಮತ್ತೇಭವಿಕ್ರೀಡಿತ. ಮೊದಲ ವೃತ್ತದಲ್ಲಿ ಇಷ್ಟದೈವ ಪುಲಿಗೆರೆ
ಸೋಮೇಶನ ಸ್ತುತಿ ಇದೆ. ಎರಡನೆಯ ಪದ್ಯದಲ್ಲಿ ' ಲೋಕಜ್ಞಾನವನ್ನು ಯಾವ
ಯಾವ ಮೂಲಗಳಿಂದ ಸಂಗ್ರಹಿಸಬಹುದು ' ಎಂಬುದನ್ನು ತಿಳಿಸಲಾಗಿದೆ. ಮೂರನೆಯ
xxiii