ಪುಟ:ಶತಕ ಸಂಪುಟ.pdf/೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಪದ್ಯದಲ್ಲಿ ಕೃತಿ ರಚನೆಯ ಉದ್ದೇಶ, ಕೃತಿ ಕರ್ತೃವಿನ ಹೆಸರು ಮತ್ತು ಕವಿಯ
ವಿನಯವಂತಿಕೆಯನ್ನು ಪ್ರಕಟಿಸಲಾಗಿದೆ. ೪ ರಿಂದ ೧೦೧ ರ ವರೆಗಿನ ೯೭
ಪದ್ಯಗಳಲ್ಲಿ ನೀತಿಬೋಧೆಯನ್ನು ಮಾಡಲಾಗಿದೆ. ೧೦೨ ರಿಂದ ೧೦೫ ರ ವರೆಗಿನ
೪ ಪದ್ಯಗಳಲ್ಲಿ ' ವಚನಬ್ರಹ್ಮ ' ದ ಸ್ವರೂಪವನ್ನು ನಿರೂಪಿಸಲಾಗಿದೆ. ೧೦೬ನೆಯ
ಪದ್ಯದಲ್ಲಿ ಕೃತಿ ಓದಿನಿಂದ ದೊರೆಯುವ ಫಲವನ್ನು ಕೊನೆಯ ಪದ್ಯ (೧೦೭)
ದಲ್ಲಿ ಕೃತಿ ಬರೆದು ಮುಗಿಸಿದ ಕಾಲವನ್ನು ಸೂಚಿಸಲಾಗಿದೆ. ೧ ಮತ್ತು ೧೦೭
ನೆಯ ಪದ್ಯಗಳನ್ನು ಹೊರತುಪಡಿಸಿ ಉಳಿದುವೆಲ್ಲ " ಹರಹರಾ ಶ್ರೀ ಚೆನ್ನಸೋಮೇಶ್ವರಾ "
ಎಂದು ಮುಕ್ತಾಯಗೊಳ್ಳುತ್ತವೆ
' ಸೋಮೇಶ್ವರ ಶತಕ ' ತುಂಬ ಜನಪ್ರಿಯವಾದ ಕೃತಿ. " ನೀತಿಯೆ ಸಾಧನಂ
ಸಕಲಲೋಕಕ್ಕಾಗಬೇಕೆಂದು ಹೇಳಿದ ಸೋಮಂ " ಎಂಬ ಕವಿಯ ಮಾತಿನಿಂದ,
ನೀತಿಬೋಧೆಯೇ ಇದರ ಗಮ್ಯ ಗುರಿ, ಪರಮ ಉದ್ದೇಶ ಎಂಬುದು ಸ್ಪಷ್ಟವಾಗುತ್ತದೆ.
ನೀತಿ ಬದುಕಿನ ಬಹುಮುಖ್ಯ ಮೌಲ್ಯ ಅದಿಲ್ಲದ ಜೀವನ ಚುಕ್ಕಾಣಿ ಇಲ್ಲದ
ಹಡಗದಂತೆ. ಬದುಕಿನ ಬಂಡಿ ಏರಿ ಭವಸಾಗರವನ್ನು ದಾಟಲು ನೀತಿಯೆಂಬ
ನಾವಿಕ ಬೇಕು. ಅದನ್ನರಿತ ಕವಿ ಈ ಕೃತಿಯನ್ನು ರಚಿಸುವ ಮೂಲಕ ಮಾನವರಿಗೆ
ಮಾರ್ಗದರ್ಶನ ಮಾಡಿದ್ದಾನೆ.
ಈ ಕೃತಿಯಲ್ಲಿ ಇಡೀ ಮಾನವ ಬದುಕಿನ ರೀತಿ - ರಿವಾಜುಗಳ ಚಿತ್ರಣವಿದೆ;
ಲೌಕಿಕ - ಪಾರಮಾರ್ಥದ ಬೋಧೆ ಇದೆ. ಮಾನವ ಸ್ವಭಾವ, ಸಾಮಾಜಿಕ ವ್ಯವಸ್ಥೆ,
ರಾಜಕೀಯ ಸ್ಥಿತಿಗತಿ, ಲೋಕದ ವ್ಯವಹಾರ, ಒಳಿತು - ಕೆಡುಕು, ಸಜ್ಜನ - ದುರ್ಜನ,
ಸುಖ - ದುಃಖ, ಶುಚಿ - ಅಶುಚಿ, ವಿಧಿ - ವಿವೇಕಗಳ ವಿವರಣೆ ಇದೆ. ಕೆಡುಕಿನ ಟೀಕೆ,
ಒಳಿತಿನ ಹೆಗ್ಗಳಿಕೆ, ಸತ್ಯದ ಪ್ರಶಂಸೆ, ಅಸತ್ಯದ ದೂಷಣೆ ಇದೆ. ಒಟ್ಟಿನಲ್ಲಿ ಸುಸಂಸ್ಕೃತ
ವ್ಯಕ್ತಿತ್ವ, ಸುಖೀ ಜೀವನ, ಸುಖೀ ಸಮಾಜ, ಸುಖೀ ರಾಷ್ಟ್ರ ನಿರ್ಮಾಣದ ಹಂಬಲವಿದೆ.
ಕವಿ ಸೋಮ ಈ ಲೋಕದ ವಿವಿಧ ಚಟುವಟಿಕೆಗಳನ್ನು ತೆರೆದ ಕಣ್ಣಿನಿಂದ
ನೋಡಿದ್ದಾನೆ. ಅಲ್ಲಿರುವ ವೈವಿಧ್ಯ - ವೈರುದ್ಯ - ವೈಶಿಷ್ಟ್ಯಗಳನ್ನು ಗುರುತಿಸಿದ್ದಾನೆ.
ಅಂಕು - ಡೊಂಕುಗಳನ್ನು ಕಂಡಿದ್ದಾನೆ. ಅವುಗಳ ಮೇಲೆ ತನ್ನ ಪ್ರತಿಕ್ರಿಯೆಗಳನ್ನು
ಹರಿಬಿಟ್ಟಿದ್ದಾನೆ. ಒಳ್ಳೆಯದನ್ನು ಪುರಸ್ಕರಿಸಿದ್ದಾನೆ; ಕೆಟ್ಟದ್ದನ್ನು ಟೀಕಿಸಿ - ತಿರಸ್ಕರಿಸಿದ್ದಾನೆ.
ನೈತಿಕ ಬದುಕಿನ ಶ್ರೇಷ್ಠತೆಯನ್ನು ಎತ್ತಿಹಿಡಿದಿದ್ದಾನೆ.
ಕವಿಗೆ ಈ ಎಲ್ಲ ಜ್ಞಾನ - ಸಂಸ್ಕಾರ ಎಲ್ಲಿಂದ ಬಂತು ? ಆತನೆ ಹೇಳುತ್ತಾನೆ:
ಕೆಲವಂ ಬಲ್ಲವರಿಂದ ಕಲ್ತು ಕೆಲವಂ ಶಾಸ್ತ್ರಂಗಳಿಂ ಕೇಳಿ ತಾಂ
ಕೆಲವಂ ಮಾಳ್ಪವರಿಂದೆ ಕಂಡು ಕೆಲವಂ ಸ್ವಜ್ಞಾನದಿಂ ನೋಡುತಂ

xxiv