ಸತಿಯೇ ಸರ್ವಕೆ ಸಾಧನ; ಕಲಿಸಲೊಂದು ವರ್ಣಮಾತ್ರಂ ಗುರು; ಶ್ರುತಿಮಾರ್ಗಂ
ಬಿಡದಾತ ಸುವ್ರತಿ; ಮಹಾಸದ್ವಿದ್ಯೆ ಪುಣ್ಯಪ್ರಭಾಸುತನೆ ಮುಕ್ತಿಗೆ ಮಾರ್ಗಂ ".
" ಮಳೆಯೇ ಸರ್ವಜನಾಶ್ರಯಂ, ಬೆಳೆಯೇ ಸರ್ವರಜೀವನಂ, ಬಳೆಯೇ
ಸರ್ವವಿಭೂಷಣಕ್ಕೆ ಮೊದಲೈ, ಪುತ್ರೋತ್ಸವ ಉತ್ಸವದೊಳ್, ಕೆಳೆಯೇ
ಸರ್ವರೊಳುತ್ತಮಂ ".
ಇನ್ನು ಯಾವುದು ಅಮಾನ್ಯ; ಯಾವುದು ಕನಿಷ್ಠ; ಯಾವುದು ವರ್ಜ್ಯ.
ಅವುಗಳ ವಿವರ ಕೆಳಗಿನಂತಿದೆ:
" ಕೊಲುವ ಕೂಟ, ನಷ್ಟಮಪ್ಪ ಕೆಲಸ, ಕೈಲಾಗದ ಆರಂಭ, ಗೆಲುವಿಲ್ಲದ
ಯುದ್ಧ, ಪಾಳುನೆಲದಲ್ಲಿ ಬೇಸಾಯ, ನೀಚರ ಆಶ್ರಯ, ಹಲವು ಆಲೋಚನೆ,
ಜೂಜು, ಲಾಭ - ಇತ್ಯಾದಿ ಭ್ರಾಂತಿ ಸಲ್ಲವು ".
" ಅವಿನೀತಂ ಮಗನೆ ?, ಅಶೌಚಿ ಮುನಿಯೆ ?, ಬೈವಾಕೆ ತಾಂ ಪತ್ನಿಯೆ ?,
ಸವಿಗೆಟ್ಟನ್ನವದೂಟವೆ ?, ಕುಜನರೊಳ್ ಕೂಡಿರ್ಪವಂ ಮಾನ್ಯನೆ ?, ಬವರಕ್ಕಾಗದವ
ಬಂಟನೆ ?, ಎಡರಿಂಗಾಗದವ ನೆಂಟನೆ?, ಶಿವನಂ ಬಿಟ್ಟವ ಶಿಷ್ಟನೆ ?- ಅಲ್ಲ".
"ಸಾಪತ್ನಿಯರಾಟ, ಸಾಲ, ಮಧುಪಾನ, ಬೇಟ, ಜಾರಿಣೀನಿವಹ ಮಾಡುವ
ಮಾಟ, ದ್ಯೂತವನಾಡುತಿಹ ಪೋಟ, ಸೂಳೆಯರೊಲ್ದಿರ್ಪಾಟ - ಇವೆಲ್ಲ ಸರಿಯಲ್ಲ ".
"ಘೃತವಿಲ್ಲದೂಟ, ಪರಾನ್ನಾಪೇಕ್ಷಿತ ಜಿಹ್ವೆ, ದಾರಿದ್ರ್ಯದ ಬಾಳ್ಕೆ, ಕಪಟಕೂಟ,
ತಾಂಬೂಲ ವಿಹೀನ ವಕ್ತ್ರ, ಪರಸ್ತ್ರೀ ನೋಡುವ ಕಣ್ಣು - ಸೊಗಸಾಗಿ ಕಾಣವು".
" ಉಣದಿರ್ಪ ಧನ, ಮುಪ್ಪಿನಲ್ಲಾಗದ ಸುತ, ಒಣಗಿದ ಪೈರಿಗೆ ಬಾರದ
ಮಳೆ, ಆಪತ್ತಿನಲ್ಲಿ ಆಸರೆಯಾಗದ ಬಂಧು, ಮಳೆಯಲ್ಲಿಕ್ಕಿದ ಜೇನು, ಶೂದ್ರ ಕಲಿತ
ವಿದ್ಯೆ, ಉಚ್ಚಿಷ್ಟವಾದ ಮೃಷ್ಟಾನ್ನ, ಸರ್ಪಕಾಯ್ವ ನಿಧಾನ, ಲುಬ್ದಾರ್ಜಿತೈಶ್ವರ್ಯ - ಇವು
ಇದ್ದೇನು ಫಲ ? ".
ಕೊಡಬೇಕುತ್ತಮನಾದವಂಗೆ ಮಗಳಂ, ಸತ್ಪಾತ್ರಕಂ ದಾನಮಂ
ಇಡಬೇಕೀಶ್ವರನಲ್ಲಿ ಭಕ್ತಿರಸಮಂ ವಿಶ್ವಾಸಮಂ ಸ್ವಾಮಿಯೊಳ್
ಬಿಡಬೇಕೈ ಲೋಭ ಬಂಧುಜನರೊಳ್ ದುಷ್ಟಾತ್ಮರೊಳ್ ಗೋಷ್ಠಿಯಂ
ಇಡಬೇಕಿದ್ದುಣಬೇಕೆಲೈ ಹರಹರಾಶ್ರೀ ಚೆನ್ನಸೋಮೇಶ್ವರಾ ೬೦
- ಹೀಗೆ ಲೋಕನೀತಿಯನ್ನು ಹೇಳಿದ ಕವಿ ಮುಂದೆ ರಾಜನೀತಿ, ವೇಶ್ಯಾನೀತಿ-
ಇತ್ಯಾದಿಗಳನ್ನು ವಿವರಿಸುತ್ತಾನೆ.
ಅರಸ, ಮಂತ್ರಿ, ದಳವಾಯಿ, ಗಣಕ, ಶಾನುಭೋಗ, ತಳವಾರ ಮೊದಲಾದವರ
ಗುಣಲಕ್ಷಣ ಹಾಗೂ ಕರ್ತವ್ಯಗಳನ್ನು ರಾಜನೀತಿಪರ ಪದ್ಯಗಳಲ್ಲಿ ವಿವರಿಸಲಾಗಿದೆ.
xxvi