ಪುಟ:ಶತಕ ಸಂಪುಟ.pdf/೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಶತಕ ಸಂಪುಟ


ಲಲನಾಸಂಭೋಗರೋಗಂ ಪಸಿವನುಡುಗಿಸುತ್ತಾರ್ತಿಯಂ ಪೊಂಗಿಸುತ್ತುಂ
ಬಲಮಂ ಕೈಗುಂದಿಸುತ್ತುಂ ಸುಜನವಚನಪಥ್ಯಕ್ಕೆ ತಾಂ ವಕ್ರಿಸುತ್ತುಂ
ಸಲೆ ಲಜ್ಜಾಭಾವಮಂ ಮೀರಿಸುತುಮಿದೆಯಿದಕ್ಕೌಷಧಂಗೊಟ್ಟು ತಂದೇ
ತಲೆಯೊಳ್ ಕೈಯಿಟ್ಟು ಪಂಪಾಪುರದರಸ ವಿರೂಪಾಕ್ಷ ರಕ್ಷಿಪ್ಪುದೆನ್ನಂ ‖ ೨೭ ‖

ದ್ವಿರದಂ ಮತ್ಸ್ಯಂ ಪತಂಗಂ ಭ್ರಮರನಹಿಯೆನಿಪ್ಪಿಂತಿವೇಕಿಂದ್ರಿಯಾರ್ಥಂ
ತಿರುಗುತ್ತಿರ್ದಪ್ಪುವಿಂತೀ ಜನನದ ಬಳಿಯೊಳ್ ದೇವ ಪಂಚೇಂದ್ರಿಯಾರ್ಥಂ
ವಿರಸಂ ವಿದ್ರೂಪಿ ಮೂರ್ಖ೦ ವಿಷಯವಿಕಳನೇನಪ್ಪೆನೆಂತಿರ್ಪೆನಯ್ಯೋ
ಕರುಣೀ ಕೈಕೊಂಡು ಪಂಪಾಪುರದರಸ ವಿರೂಪಾಕ್ಷ ರಕ್ಷಿಪ್ಪುದೆನ್ನಂ ‖ ೨೮ ‖

ತರದಿಂ ರೋಗಂ ವಿಷಂ ವೃಶ್ಚಿಕವನಲನಹಿವ್ಯಾಘ್ರಮುಗ್ರಾಯುಧಂಗಳ್
ದುರಿತಂ ಮತ್ತದ್ವಿಪಂ ಮೂರ್ಖತೆ ಪೊಡೆವ ಸಿಡಿಲ್ ದುರ್ಜನಂ ದುರ್ಮದಂ ತ-
ಸ್ಕರರೆಂಬೀ ಕಂಟಕಸ್ತೋಮದ ನಡುವೊಡಲಿರ್ಪಂದಮೇಂ ಸೋಜಿಗಂ ಶಂ-
ಕರ ನೀಂ ಕೈಕೊಂಡು ಪಂಪಾಪುರದರಸ ವಿರೂಪಾಕ್ಷ ರಕ್ಷಿಪ್ಪುದೆನ್ನ ‖ ೨೯ ‖

ಧನಮಂ ಸೈತಾರ್ಜಿಪೆಂ ಬೈತಿಡುವೆನದಳೊಳಂ ಪುಣ್ಯವೈವಾಹಮಂ ಮಾ-
ಳ್ಪೆನದಂ ಪುತ್ರರ್ಗಲಂಕಾರಮನೊದವಿಸುವೆಂ ಕೂಡಿಭೋಗಿಪ್ಪೆನೆಂದಾಂ
ನೆನೆಯುತ್ತಿರ್ಪನ್ನೆಗಂ ತೊಟ್ಟನೆ ಮರಣಮದಾಗಲ್ಕೆ ಬೇಳಪ್ಪ ದುಶ್ಚಿಂ-
ತನೆಯಂ ತರ್ಗೊತ್ತಿ ಪಂಪಾಪುರದರಸ ವಿರೂಪಾಕ್ಷ ರಕ್ಷಿಪ್ಪುದೆನ್ನಂ ‖ ೩೦ ‖

ಕನಕಂ ನೀರಕ್ಕರಂ ಪೆಂಡಿತಿ ಕನಸು ಸುತರ್ ಮಂಜು ತಾಯ್ತಂದೆ ವಾಯಂ
ತನುವಭ್ರಚ್ಛಾಯೆ ಮಿತ್ರರ್‌ ಗಗನಕುಸುಮಮಿಷ್ಟರ್‌ ಮರೀಚೀಜಲಂ ಯೌ-
ವನಧರ್ಮ೦ ಮೇಘಚಾಪಂ ಗೃಹವಚಿರವೆನಿಪ್ಪಿಂತಿವಂ ಬಿಟ್ಟು ನಿಮ್ಮಂ
ನೆನೆಯುತ್ತಿರ್ಪಂತೆ ಪಂಪಾಪುರದರಸ ವಿರೂಪಾಕ್ಷ ರಕ್ಷಿಪ್ಪುದೆನ್ನಂ ‖ ೩೧ ‖

ಎರವೀ ದೇಹಂ ಹಿರಣ್ಯಂ ಪುದು ಸತಿ ಪಗೆಯಾತ್ಮೇಷ್ಟರೌ‌ಪಾಧಿಕರ್ ಸೋ-
ದರರೆಲ್ಲಂ ವೈರಿಗಳ್ ತಾವೆನಿಪಿದನಳೆದುಂ ಮತ್ತಮಾವರ್ಥದಿಂದಂ
ಪೊರೆವೆಂ ರಕ್ಷಿಪ್ಪೆನೊಲ್ವೆಂ ಬಿಡದೆ ನಡೆಯಿಪೆಂ ನಂಬಿ ನಚ್ಚಿರ್ಪೆನೆನ್ನಿಂ
ಮರುಳಾರಾರಾನೆ ಪಂಪಾಪುರದರಸ ವಿರೂಪಾಕ್ಷ ರಕ್ಷಿಪ್ಪುದೆನ್ನಂ ‖ ೩೨ ‖