ಪುಟ:ಶತಕ ಸಂಪುಟ.pdf/೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ


ಜಲಮಂ ಪೊರ್ದಿರ್ಪ ಶೈವಾಲದ ತೆರದೆ ಕರಂ ದೀಪಿಕಾಚ್ಛಾಯೆಯೆಂತು-
ಜ್ಜ್ವಲವಾಂತಾ ಚಂದ್ರಲಕ್ಷಂ ಮುಕುರದೊಳಗೆ ತೋರ್ಪಾ ಪ್ರತಿಚ್ಛಾಯೆಯೆಂತಂ-
ತಲೆಯುತ್ತುಂ ಪತ್ತಿ ಬೆನ್ನಂ ಬಿಡದಿದೆ ಘನಸಂಸಾರವೀ ಮಾಯೆಯಂ ನಿ-
ರ್ಮಲ ನೀನೇ ತೀರ್ಚಿ ಪಂಪಾಪುರದರಸ ವಿರೂಪಾಕ್ಷ ರಕ್ಷಿಪ್ಪುದೆನ್ನಂ ‖ ೩೩ ‖

ನೆಳಲೊಳ್ ಪೋರ್ವಂತಿರಾಕಾಶಮನವಯವದಿಂದೀಸುವಂತುರ್ವಿಯಂ ತಾಂ
ತೊಳೆವಂತಭ್ರಾಳಿಯಂ ಕಂಡರಿಸುವ ತೆರದಿಂ ಧೂಮಮಂ ಸೀಳ್ವ ಪಾಂಗಿಂ
ಬಳಲುತ್ತಿರ್ದಪ್ಪೆನೀ ಮಾಯೆಯ ಮನೆಯ ದುವಾಳಿಂದೆ ನಿರ್ಮಾಯ ನಿತ್ಯೋ-
ಜ್ಜ್ವಳ ನಿಸ್ತ್ರೈಗುಣ್ಯ ಪಂಪಾಪುರದರಸ ವಿರೂಪಾಕ್ಷ ರಕ್ಷಿಪ್ಪುದೆನ್ನಂ ‖ ೩೪ ‖

ಮದದಿಂದಂ ಪೊಳ್ತು ಪೋಗುತ್ತಿದೆ ಶಿವಶಿವ ಮಾತ್ಸರ್ಯದಿಂ ಪೊಳ್ತು ಪೋಗು-
ತ್ತಿದೆ ಆಹಾ ಪೊಳ್ತು ಪೋಗುತ್ತಿದೆ ಮುಸುಕಿದ ತತ್‌ಕಾಮದಿಂ ಪೊಳ್ತು ಪೋಗು-
ತ್ತಿದೆ ಲೋಭವ್ಯಾಪ್ತಿಯಿಂ ಕೋಪದಿನಡೆಯದೆ ದುರ್ಮೋಹದಿಂ ಪೊಳ್ತುಪೋಗು-
ತ್ತಿದೆ ತಂದೇ ತಂದೆ ಪಂಪಾಪುರದರಸ ವಿರೂಪಾಕ್ಷ ರಕ್ಷಿಪ್ಪುದೆನ್ನಂ ‖ ೩೫ ‖

ಎರೆದೇವೆಂ ಪೊರ್ದಿಯೇವೆಂ ನಿರುತದೆ ನೆನದೇವೆಂ ಮನಂ ಮುಟ್ಟಿಯೇವೆಂ
ಕರೆದೇವೆಂ ಕೂರ್ತುಮೇವೆಂ ಬಿಡದತಿಭರದಿಂ ನಂಬಿಯೇವೆಂ ಶಿವಾ ಮದ್
ಗುರುವೆ ಇನ್ನೇವೆನೇವೆಂ ನಿಜಕರುಣವಣಂ ಪೊರ್ದದಸ್ಪೃಶ್ಯನಂ ಶಂ-
ಕರ ನೀಂ ಕೈಕೊಂಡು ಪಂಪಾಪುರದರಸ ವಿರೂಪಾಕ್ಷ ರಕ್ಷಿಪ್ಪುದೆನ್ನಂ ‖ ೩೬ ‖

ತವೆ ರೋಗಂ ಪತ್ತಿ ಗಾತ್ರಂ ಧರಣಿಗೆ ಕೆಡೆದಿರ್ಪಲ್ಲಿಯುಗ್ರದ್ವಿಪಂ ಬಂ-
ದವಿಚಾರಂ ಕಾಯ್ದು ಬಲ್ಪಿಂದೊದೆಯೆ ಮುದುಡಿ ಬೀಳ್ವಲ್ಲಿ ಕಾಳ್ಕಿಚ್ಚು ಸುತ್ತಂ
ಕವಿತಂದಾ ಪೊಳ್ತು ನಾಲ್ಕುಂ ದೆಸೆಗೆ ಪರಿದು ಬೇವದೆ ನೀವಲ್ಲದಾರ್‌ ಕಾ-
ವವರಿಂ ಕಾಮಾರಿ ಪಂಪಾಪುರದರಸ ವಿರೂಪಾಕ್ಷ ರಕ್ಷಿಪ್ಪುದೆನ್ನಂ ‖ ೩೭ ‖

ಎಡೆಗೊಂಡೀ ಮುಪ್ಪುದೋಳಲ್ ನೆರೆ ನೆಗೆದು ಸಿರಂದೂಗಿ ಬೆನ್ ಬಾಗಿಯೆಂತ-
ಕ್ಕಡಿಯೆತ್ತಲ್ಕಾರದೆತ್ತಂ ದಡದಡಿಸಿ ಕರಂ ಜೋಲ್ದು ಕೋಲೂಟಿ ನಿಂದುಂ

——————
೧+ ಚ್ಚಾ (ಆ)