ವಿಷಯಕ್ಕೆ ಹೋಗು

ಪುಟ:ಶತಕ ಸಂಪುಟ.pdf/೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೩೭


ತನತನಗಿಂದ್ರ-ಚಂದ್ರ-ರವಿ-ಕರ್ಣ-ದಧೀಚಿ-ಬಲೀಂದ್ರನೆಂದು ಮೇಣ್
ಅನವರತಂ ಪೊಗಳ್ದು ಕೆಡಬೇಡೆಲೆ ಮಾನವ ನೀನಹರ್ನಿಶಂ
ನೆನೆ ಪೊಗಳರ್ಚಿಸೆಮ್ಮ ಕಡು ಸೊಂಪಿನ ಪೆಂಪಿನ ಹಂಪೆಯಾಳ್ದನಂ‖ ೮೨ ‖

ಎಡಹಿದೊಡಿಲ್ಲ ನಿದ್ರೆ ನಿಡಿದಾದೊಡಮಿಲ್ಲುಸಿರಿಕ್ಕುತಿರ್ಪುಸಿರ್
‌ತಡೆದೊಡಮಿಲ್ಲ ಬಿಕ್ಕು ಬಿಡದೊತ್ತಿದೊಡಂ ತರಿಸಂದೊಡಿಲ್ಲ ಸೀಂ-
ತೊಡೆ ತನಗಿಲ್ಲ ಕೆಮ್ಮಿದೊಡಮಿಲ್ಲದದಸ್ಥಿರಮಿಂತು ಕೆಟ್ಟು ಪೋ-
ಪೊಡಲಿದಕೇಕೆ ಕಾಮವಿದಕೇಕೆ ಮದಾಂಧತೆ ಹಂಪೆಯಾಳ್ದನೇ‖ ೮೩ ‖

ಜನಿಯಿಸುತಿರ್ಪ ಕೋಟಿ ಜನನಂಗಳೊಳುತ್ತಮಮುತ್ತಮೋತ್ತಮಂ
ಮನುಜಭವಂ ವಿಚಾರಿಪೊಡಿದಂ ಪಡೆದುಂ ಮರುಳಾಗಿ ಸತ್ತೊಡೀ
ಜನನವಿದೆಂದು ಬರ್ಪುದು ವೃಥಾ ಕೆಡದಿರ್ ಕೆಡದಿರ್ ನಿರಂತರಂ
ನಿನಗೆ ಹಿತೋಪದೇಶಮಿದು ಮಾನವ ಪೂಜಿಸು ಹಂಪೆಯಾಳ್ದನಂ ‖ ೮೪ ‖

ತನ್ನಯೆ ಕಾಮಮಂ ಸುಡದೆ ತನ್ನಯೆ ಕೋಪಮುಮಂ ತೆರಳ್ಚದೀ
ತನ್ನಯೆ ಲೋಭಮೋಹಮನೆ ತನ್ನ ಮದೋನ್ನತ ಮತ್ಸರಾಳಿಯಂ
ತನ್ನೊಳೆ ತಾನೆ ಸಂತವಿಡಲೊಲ್ಲದೆಯನ್ನರನಿಂತು ಮಾಡೆನು-
ತ್ತುಂ ನೆರೆ ಪೇಳ್ದು ಬುದ್ದಿಗಲಿಸಲ್ ತೆರಪೆಲ್ಲಿತು ಹಂಪೆಯಾಳ್ದನೇ ‖ ೮೫ ‖

ಹೆಂಡತಿ ಬಾರಳರ್ಥವದು ಬಾರದು ಪುತ್ರರೆ ಬಾರರಿಷ್ಟರುಂ
ಕಂಡ ಸಖೀಜನಂ ಜನನಿಯುಂ ಪಿತನುಂ ನೆರೆ ಬಾರರಕ್ಕಟಾ
ತಂಡದ ಪಾಪಪುಣ್ಯವಿವೆ ಬರ್ಪುವಿವರ್ಕೆ ಮಹೇಶನಂ ನತಾ-
ಖಂಡಲವೃಂದನಂ ಬಿಡದೆ ಪೂಜಿಸು ಮಾನವ ಹಂಪೆಯಾಳ್ದನಂ ‖ ೮೬ ‖
ನರರಂ ಸೇವಿಸುತಯ್ಯ ಜೀಯೆನುತುಮಿರ್ಪೇನೆಂದೊಡಂ ದೈನ್ಯಮು-
ಬ್ಬರಿಸುತ್ತುಂ ತನುಗುಂದಿಯುಂ ತನಗೆ ತಾನೆಂತಕ್ಕೆಯುಂ ಬೇಡುತಿ-
ರ್ಪಿರವಂ ಸುಟ್ಟು ಬಿಸುಟ್ಟು ಭಕ್ತಿಯೊಳಗೋಲಾಡಲ್ ಮನಂದಂದು ಶಂ-
ಕರನಂ ಶಾಶ್ವತನಂ ಕೃಪಾಜಲಧಿಯಂ ಕಂಡೆಂ ವಿರೂಪಕ್ಷನಂ
‖ ೮೭ ‖