ವಿಷಯಕ್ಕೆ ಹೋಗು

ಪುಟ:ಶತಕ ಸಂಪುಟ.pdf/೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೫೨
ಶತಕ ಸಂಪುಟ


ತೊನೆಯಲ್ ತಾಳ್ಮೆಯನಾಂತವಂ ಬೆರೆತೊಡಾತಂ ಗರ್ವಿ ಕೈಮಾಡಲಾ
ತನೆ ಸತ್ಯವ್ರತಿ ಸೂರುಳಿಟ್ಟು ಪುಸಿಯಲ್ ಭಾಷಾ ಪ್ರತೀಪಾಲಕಂ
ಕನಲಲ್ ಸೈರಣೆವಂತನುದ್ಗುಣಯುತಂ ತಾಂ ನಿರ್ಗುಣಂತೋರಲಾ
ಧನಿಕಂ ಸತ್ಕುಲಜಾತನೈ ಹರಹರ ಶ್ರೀ ಚನ್ನಸೋಮೇಶ್ವರಾ
‖ ೫೮ ‖

ಕರೆಯಲ್ ಕರ್ಣಗಳಿರ್ದು ಕೇಳರು ಕರಂಗಳ್ ಚೆಲ್ವನಾಂತಿರ್ದೊಡಂ
ಮುರಿದಂತಿರ್ವರ ಮೇಲೆ ಹೇರಿ ನಡೆವರ್ ಮಾತಿರ್ದೊಡಂ ಮೂಕರ-
ಪ್ಪರು ಕಾಲಿರ್ದೊಡೆ ಕಾಕರಲ್ಪರಿಡೆ ಕಾಲಂ ಪೂರ್ವಪುಣ್ಯಂಗಳಿಂ
ಸಿರಿಪೊರ್ದಲ್ ನೆರೆಗಾಣರೈ ಹರಹರಾ ಶ್ರೀ ಚೆನ್ನಸೋಮೇಶ್ವರಾ ‖ ೫೯ ‖

ಕೊಡಬೇಕುತ್ತಮನಾದವಂಗೆ ಮಗಳಂ ಸತ್ಪಾತ್ರಕಂ ದಾನಮಂ
ಇಡಬೇಕೀಶ್ವರನಲ್ಲಿ ಭಕ್ತಿರಸಮಂ ವಿಶ್ವಾಸಮಂ ಸ್ವಾಮಿಯೊಳ್
ಬಿಡಬೇಕೈ ಧನಲೋಭ ಬಂಧುಜನರೊಳ್ ದುಷ್ಟಾತ್ಮರೊಳ್ ಗೋಷ್ಠಿಯಂ
ಇಡಬೇಕಿದ್ದುಣಬೇಕೆಲೈ ಹರಹರ ಶ್ರೀ ಚೆನ್ನಸೋಮೇಶ್ವರಾ
‖ ೬೦ ‖

ವರವಿದ್ವಾಂಸ ಕವೀಂದ್ರ ಗಾಯಕ ಪುರಾಣಜ್ಞರ್ ಮಹಾಪಾಠಕರ್
ಪರಿಹಾಸೋಚಿತಿತಿಹಾಸ ಮಂತ್ರಶಕುನಜ್ಞ‌ರ್ ವಾಗ್ಮಿಗಳ್ ವೇಶಿಯರ್
ಶರಶಸ್ತ್ರಾದಿ ಸಮಸ್ತ ವಿದ್ಯೆಯರಿದರ್ ಕಾಲಾಳು ಮೇಲಾಳಿರಲ್
ದೊರೆಯೊಡ್ಡೋಲಗ ಚೆಲ್ವುದೈ ಹರಹರಾ ಶ್ರೀ ಚೆನ್ನಸೋಮೇಶ್ವರಾ‖ ೬೧


ಬಲವಂತರ್ ನೆರವಾಗಲಿಕ್ಕೆಲದವರ್‌ ಮಿತ್ರತ್ವಮಂ ತಾಳ್ದಿರಲ್
ನೆಲನೆಲ್ಲಂ ಬೆಸಲಾಗೆ ಧಾನ್ಯತತಿಯಂ ನಿಷ್ಕಾರಣಂ ದಂಡಮಂ
ಕೊಳದೆಲ್ಲರ್‌ ಸೊಗವಾಗೆ ನಂಬುಗೆಗಪೋಹಂ ಬಾರದಾಳಲ್ ನಿಜಂ
ಬಲುಭಾಗ್ಯಂ ದೊರೆಗಪ್ಪುದೈ ಹರಹರಾ ಶ್ರೀ ಚೆನ್ನಸೋಮೇಶ್ವರಾ‖ ೬೨ ‖