ವಿಷಯಕ್ಕೆ ಹೋಗು

ಪುಟ:ಶ್ರೀರಾಮಕೃಷ್ಣ ಪರಮಹಂಸರ ಚರಿತ್ರೆ.djvu/೧೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಚರಿತ್ರೆ
೧೦೩

ಮನಸ್ಸು ಹೋಗುವುದೆಂದೂ, ಅವರ ಯೋಚನೆ, ಇವರ ಮುಖ ಇವೇ ಜ್ಞಾಪಕಕ್ಕೆ ಬರುತ್ತಿದನೆಂದೂ ಮನಸ್ಸಿಗೆ ಸಮಾಧಾನವೇ ಇರುತ್ತಿರಲಿಲ್ಲವೆಂದೂ ಹೇಳಲು, ಆಕೆಗೆ ಯಾರಮೇಲೋ ವಿಶೇಷವಾದ ಮಮತೆಯಿದ್ದದರಿಂದ ಹೀಗಾಗುತ್ತಿತ್ತೆಂದು ತಿಳಿದು, ಆಕೆಯನ್ನು ಕುರಿತು “ ಯಾರಮುಖ ಜ್ಞಾಪಕಕ್ಕೆ ಬರುತ್ತದಮ್ಮ? ಸಂಸಾರದಲ್ಲಿ ಯಾರ ಮೇಲೆ ನಿಮಗೆ ವಿಶೇಷ ಅಂತಃಕರಣ, ಹೇಳಿ” ಎಂದು ಕೇಳಿದರು. ಆಕೆಯು ತನ್ನ ಅಣ್ಣನಮಗು ಒ೦ದು ಇತ್ತೆಂದೂ, ಅದನ್ನು ಸಾಕುತ್ತಿದ್ದಳೆಂದೂ ಅದರಮೇಲೆ ಆಕೆಗೆ ವಿಶೇಷ ಮಮತೆಯೆಂದೂ ಹೇಳಿದಳು. ಅದನ್ನು ಕೇಳಿ ಪರಮಹಂಸರು “ ಒಳ್ಳೆಯದು; ಹಾಗಾದರೆ ಇನ್ನು ಮೇಲೆ ಆ ಹುಡುಗನಿಗೆ ನೀವು ಏನೇನು ಮಾಡುತ್ತೀರಿ---ಊಟ ಮಾಡಿಸುವುದು ಬಟ್ಟೆ ಹಾಕುವುದು---ಅದೆಲ್ಲಾ ಸಾಕ್ಷಾತ್ ಗೋಪಾಲನಿಗೆ ಮಾಡುವಹಾಗೆ ಭಾವಿಸಿ ಮಾಡಿ ; ಗೋಪಾಲರೂಪಿಯಾದ ಭಗವಂತನೇ ಆ ಹುಡುಗನೊಳಗಿರುವ ಹಾಗೂ, ಅವನಿಗೇ ಊಟ ಮಾಡಿಸುವುದು, ಬಟ್ಟೆ ಹಾಕುವುದು, ಸೇವೆಮಾಡುವುದು ಇವನ್ನೆಲ್ಲಾ ಮಾಡುವಹಾಗೂ ಭಾವಿಸಿಕೊಂಡು ಮಾಡಿ ; ಮನುಷ್ಯನಿಗೆ ಮಾಡುತ್ತೇನೆಂದು ಯಾಕಮ್ಮ ಭಾವಿಸಿ ಕೊಳ್ಳಬೇಕು ? ಎಂಥ ಭಾವವೋ ಅಂಥ ಲಾಭ! ” ಎಂದು ಹೇಳಿದರು. ಆ ಕ್ರಮವನ್ನು ಅನುಸರಿಸುತ್ತ ಬರಲು ಆಕೆಗೆ ಶೀಘ್ರದಲ್ಲಿಯೇ ವಿಶೇಷವಾದ ಮಾನಸಿಕ ಉನ್ನತಿ ಯುಂಟಾಯಿತಂತೆ. ಮತ್ತೊಬ್ಬಾಕೆಯು ಬಂದು " ಸ್ವಾಮಿ ನನಗೆ ಬಹಳವಾಗಿ ದೇವರ ಧ್ಯಾನ ಮಾಡಬೇಕೆಂದಾಶೆಯಿದೆ. ಮನಸ್ಸನ್ನೆಲ್ಲಾ ಅವನಮೇಲೆ ಇಟ್ಟುಬಿಡಬೇಕೆನ್ನುತ್ತೇನೆ; ಆದರೆ ಏನೇನು ಮಾಡಿದರೂ ಮನಸ್ಸೇ ಬಗ್ಗುವುದಿಲ್ಲವಲ್ಲ! ಏನುಮಾಡಲಿ ?” ಎಂದು ಕೇಳಿದಳು. ಅದಕ್ಕೆ ಪರಮಹಂಸರು “ ಅವನಮೇಲೆ (ದೇವರಮೇಲೆ) ಭಾರಹಾಕಿ ಬಿಡಬೇಕಮ್ಮ! ಗಾಳಿಗೆ ಸಿಕ್ಕಿದ ಎಂಜಲೆಲೆಯ ಹಾಗಿದ್ದು ಬಿಡಬೇಕು. ಅದು ಹ್ಯಾಗೆ ಅಂತೀರಿ ? ಎಲೆ ಬಿದ್ದಿದೆ. ಅದನ್ನು ಗಾಳಿ