ಪುಟ:ಸಂತಾಪಕ.djvu/೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಸಂತಾಪಕ.

೧೩


ಈಗ ಆ ಪಥಿಕನು ಮರದಮೇಲಿಲ್ಲ. ಅವನು ಕಮಲಾಕರದತ್ತನವಿಲಾಸ
ಭವನದಲ್ಲಿ ಕುಳಿತಿರುವನು. ಅವನು ಇಲ್ಲಿಗೆ ಹೇಗೆ ಬಂದನೆಂಬುದನ್ನೂ ,
ಬಂದುದಕ್ಕೆ ಕಾರಣವನ್ನೂ ಸ್ವಲ್ಪ ತಿಳಿಸುವೆವು. ಪಥಿಕನು ಆ ಘಾತುಕ
ರಿಂದ ಬಂಧಿತನಾಗಿ ವ್ಯಥೆಪಡುತ್ತಿರಲು ಅದೇ ಮಾರ್ಗದಲ್ಲಿ ಬರುತ್ತಿದ್ದ
ಪ್ರಸನ್ನನಗರದ ಪ್ರಯಾಣಿಕನೊಬ್ಬನು ಅವನನ್ನು ಕಂಡು ಬಂಧನದಿಂದ
ಮುಕ್ತನನ್ನಾಗಿ ಮಾಡಿದನು. ನಮ್ಮ ಪೂರ್ವಪರಿಚಿತನಾದ ಪಥಿಕನು
ಅಲ್ಲಿಂದ ಹೊರಟು ಪ್ರಸನ್ನನಗರದ ಕಮಲಾಕರದತ್ತನ ಮನೆಗೆ ಬಂದನು.
ಪಥಿಕನ ಹೆಸರು ವಿಜಯವರ್ಮ. ಇವನಿಗೆ ಇನ್ನೂ ಮದುವೆಯಾಗಿರಲಿಲ್ಲ.
ಧೈರ್ಯಶಾಲಿಯಾಗಿಯೂ, ಸೌಂದರ್ಯವಂತನಾಗಿಯೂ ಇದ್ದ ಇವನನ್ನು
ಕಮಲಾಕರದತ್ತನು ಪುತ್ರವಾತ್ಸಲ್ಯದಿಂದ ಪರಿಪಾಲಿಸುತಿದ್ದನು. ಬಾಲ್ಯ
ದಲ್ಲಿಯೇ ಇವನಿಗೆ ಮಾತಾಪಿತೃಗಳ ವಿಯೋಗವುಂಟಾದುದರಿಂದ ಇವನು
ಕಮಲಾಕರನನ್ನು ಪಿತೃಸಮಾನನೆಂದೇ ಭಾವಿಸಿ ಅವನ ಮನೆಯಲ್ಲಿದ್ದು
ವಿದ್ಯಾವ್ಯಾಸಂಗವನ್ನು ಮಾಡಿ ಆತನ ಅಪ್ಪಣೆಯನ್ನು ಪಡೆದು ತನ್ನ ಜನ್ಮ
ಭೂಮಿಯಾದ ವಿಮಲನಗರಕ್ಕೆ ಕೆಲದಿನಗಳ ಹಿಂದೆ ಹೊರಟುಹೋಗಿದ್ದನು.
ಈತನು ಹೊರಟುಹೋಗುವಾಗ ಕಮಲಕುಮಾರಿಯನ್ನು ಮದುವೆಯಾಗ
ಬೇಕೆಂದಿದ್ದ ತನ್ನ ಅಭಿಪ್ರಾಯವನ್ನು ದತ್ತನ ಸಾಕುಮಗಳಾದ ಪಾಟಲಿಕೆ
ಯೊಡನೆ ತಿಳಿಸಿದ್ದನು. ಅವಳು ಈ ವಿಷಯವನ್ನು ಕುಮಾರಿಯದಿರಾಗಿ ದತ್ತ
ನಿಗೆ ತಿಳಿಸಲು ದತ್ತನು ಸಮ್ಮತಿಸಿದನು. ಕುಮಾರಿಯಾದರೋ ಈ ವಿಚಾರ
ದಲ್ಲಿ ಅಸಂತುಷ್ಟಳಾದಳು. ಕಾಲಕ್ರಮವಾಗಿ ಈ ವಿಷಯವು ವಿಜಯವರ್ಮ
ನಿಗೆ ತಿಳಿಯಲು ಅವನು ಕುಮಾರಿಯ ಮನಸ್ಸನ್ನು ತನ್ನ ಅಧೀನವನ್ನಾಗಿ
ಮಾಡಿಕೊಳ್ಳಲೆಳಸಿ ಅವಳಿಗೆ ಅನುರಾಗಸೂಚಕಗಳಾದ ಪತ್ರಗಳನ್ನು ಆಗಾಗ
ಬರೆಯುತ್ತಿದ್ದನು. ಆದಿನ ಕಮಲಕುಮಾರಿಯು ಲತಾಗೃಹದಲ್ಲಿ ಹರಿದು
ಹಾಕಿದ ಪತ್ರಿಕೆಯೂ ಇವನು ಬರೆದಿದ್ದುದೇ. ಬಹುಕಾಲವಾದರೂ ಈ
ವಿವಾಹದ ವಿಚಾರವು ಇತ್ಯರ್ಥವಾಗದಿದ್ದುದರಿಂದ, ಇದಿರಾಗಿ ನಿಂತು
ಮದುವೆಯನ್ನು ನಿಷ್ಕರ್ಷೆಮಾಡಬೇಕೆಂಬ ಅಭಿಪ್ರಾಯದಿಂದಲೇ ವಿಜಯ
ವರ್ಮನು ಇಲ್ಲಿಗೆ ಬಂದುದು. ಇವನು ಮಾರ್ಗಮಧ್ಯದಲ್ಲಿ ತನಗೆ
ಸಂಘಟಿಸಿದ ವಿಪತ್ತುಗಳನ್ನೆಲ್ಲ ಸ್ಮರಿಸಿಕೊಂಡು ಆಶ್ಚರ್ಯಯುಕ್ತನಾಗಿ