ಪುಟ:ಸಮತಿ ಮದನಕುಮಾರರ ಚರಿತ್ರ.djvu/೧೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸುಮತಿ ಮದನಕುಮಾರರ ಚರಿತ್ರೆ ೧೦೭ ತಾನೊ? ಕಡಲೆಬೇಳೆ, ಹೆಸರಬೇಳೆಯನ್ನು ನನಗೂ ಕೊಡಿಸುತೀಯೋ, ಎಂದು ಹೇಳುತಾ ಮೊಸರಿನ ಗಡಿಗೆಯನ್ನು ಎತ್ತಿ ಆ ಹುಡುಗೀ। ತಲೆಯ ಮೇಲೆ ಸುರಿದು ಬಿಟ್ಟನು, ಹುಡುಗಿಯು ಗಟ್ಟಿಯಾಗಿ ಅಳುತಾ ಹೊರಟುಹೋದಳು. ತಾನು ಮಾಡಿದ ಕೆಲಸ ಇಷ್ಟರಮಟ್ಟಿಗೆ ಸಾಗಿತಲ್ಲಾ, ತನ್ನನ್ನು ಯಾರೂ ಏನನ್ನೂ ಮಾಡಲಿಲ್ಲವಲ್ಲಾ, ಎಂದು ಧೈರ್ಯದಿಂದ ಎದೆ ಯನ್ನು ಇನ್ನೂ ಕಲ್ಲುಮಾಡಿಕೊಂಡು ಮುಂದಕ್ಕೆ ನಡೆದನು. ಅಲ್ಲಿ ಹತ್ತಿಪ್ಪತ್ತು ಜನ ಹುಡುಗರು ಚೆಂಡಾಡುತಿದ್ದರು. ಅವರ ಜೊತೆಗೆ ಇವನೂ ಸೇರಿ, ಒ೦ದೆರಡು ಆಟವನ್ನು ಆಡಿ, ಅವರ ಚೆಂಡನ್ನು ಆಳವಾದ ಒಂದು ಬಚ್ಚಲಿಗೆ ಹಾಕಿದನು. ಆ ಹುಡುಗರೆಲ್ಲರೂ ಚೆಂಡನ್ನು ಹುಡುಕಬೇಕೆಂದು ಬಚ್ಚಲತಡಿಯಲ್ಲಿ ಬಂದು ಸಾಲಾಗಿ ನಿಂತುಕೊಂಡು ನೋಡುತಿದ್ದರು. ಈ ನೀಚನು ಅವರಲ್ಲಿ ಒಬ್ಬ ಹುಡುಗನ ಮೇಲೆ ಮತ್ತೊಬ್ಬ ಹುಡುಗನನ್ನು ತಳ್ಳಿದನು. ಅವನು ಇನ್ನೊಬ್ಬನ ಮೇಲೆ ಬಿದ್ದನು. ಹೀಗೆ ಆ ಹುಡುಗರೆಲ್ಲರೂ ಒಬ್ಬರ ಮೇಲೆ ಒಬ್ಬರು ಬಿದ್ದು ಬಚ್ಚಲೊಳಕ್ಕೆ ಉರುಟಿಕೊಂಡರು. ಎಲ್ಲರಿಗೂ ಮೈ ಎಲ್ಲಾ ಕೊಟ್ಟೆ ಯಾಯಿತು. ಆ ದುರ್ಮಾರ್ಗನು ತಲೆಯನ್ನು ತಪ್ಪಿಸಿಕೊಂಡು ಓಡಿ ಹೋದನು. ಮುಂದೆ ದಾರಿಯಲ್ಲಿ ಒ೦ದಾನೊಂದು ಕತ್ತೆ ಮೇಯು ತಿತ್ತು, ಈ ದುಷ್ಟ ಶಿರೋಮಣಿಯು ಒಂದು ಮುಳ್ಳು ಗಿಡವನ್ನು ಮುರಿದು, ಅದರ ಬಾಲಕ್ಕೆ ಕಟ್ಟಿದನು. ತರುವಾಯ ಭೈರೂ, ಭೂ, ಎಂದು ತನ್ನ ನಾಯಿಯನ್ನು ಭೂಬಿಟ್ಟನು. ಒಕ್ಕಡೆ ಮುಳ್ಳು ಚುಚ್ಚು ವುದು, ಒಕ್ಕಡೆ ನಾಯಿ ಬಗುಳುವುದು, ಹೀಗೆ ಎರಡರ ಮಧ್ಯೆ ಸಿಕ್ಕಿ ಕೊಂಡು ಕತ್ತೆಯು ಬಹು ಸಂಕಟಪಟ್ಟಿತು, ಆ ಗಾಬರಿಯಲ್ಲಿ ಕತ್ತೆಯು ಓಡುತ್ತಾ ನಾಯಿಯ ಮೇಲೆ ಬಲವಾಗಿ ಒದ್ದು ಬಿಟ್ಟಿತು. ಆ ಏಟಿನಿಂದ ನಾಯಿಯು ಆ ಗಳಿಗೆಯಲ್ಲಿಯೇ ಸತ್ತು ಒರಗಿತು. ಈ ತುಂಟನು ತನ್ನ ನಾಯಿ ಹೋಯಿತಲ್ಲಾ ಎಂದು ಸ್ವಲ್ಪವಾದರೂ ವ್ಯಸನ ಪಡದೆ ಹತ್! ನಿನಗೆ ಹಾಗೇ ಆಗಬೇಕು, ಎಂದು ಶ್ವಾನವನ್ನು ಬೈದು ಮುಂದಕ್ಕೆ ಹೋದನು.