ಪುಟ:ಸ್ವಾಮಿ ಅಪರಂಪಾರ.pdf/೧೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೧೭೦

ಸ್ವಾಮಿ ಅಪರಂಪಾರ

“ರಾಜ್ಯ ಬಿಟ್ಟು ಬಂದವು. ಅದರ ಹೊರಗೂ ಕೂಡಾ ನಮಗಿಷ್ಟಬಂದಲ್ಲಿ ನಾವಿರುವಂತಿಲ್ಲ
ಅಲ್ಲವೆ ?”
“ದಕ್ಷಿಣದಲ್ಲಿ ನೀವೆಲ್ಲರೂ ಇರಬಾರದು. ಫಕೀರರು, ಇತರ ಕ್ಷುದ್ರಜನರು ನಿಮ್ಮ
ಭೇಟಿಗೆ ಬರುತ್ತಾರೆ. ನಿಮಗೂ ತೊಂದರೆ, ನಮಗೂ ತೊಂದರೆ.”
“ಅಲ್ಲವೆ ನಾವು ಕ್ಷೇಮವಾಗಿರಬೇಕೂಂತ ಎಷ್ಟೊಂದು ಮುತುವರ್ಜಿ ವಹಿಸುತ್ತೀರಿ?
ಟೀಪುವಿನ ಮಕ್ಕಳು ಮೊಮ್ಮಕ್ಕಳನ್ನು ಇಲ್ಲಿಂದ ಒಯ್ದು ಕಲಕತ್ತೆಯಲ್ಲಿಟ್ಟಿದೀರಿ ಅಲ್ಲವೆ ?”
“ಹೌದು.”
“ವೇಲೂರಲ್ಲೇ ಇರುತ್ತೇವೆ ಎಂದು ಆಗ್ರಹ ಮಾಡಿದರೆ ನಮ್ಮನ್ನೂ ಬಲಾತ್ಕಾರವಾಗಿ
ಅಲ್ಲಿಗೆ ಒಯ್ಯುತ್ತೀರಿ.”
“ಅಂಥ ಕಹಿ ಪ್ರಸಂಗ ಉಂಟಾಗದು ಅಂದುಕೊಂಡಿದೇವೆ.”
“ಆಗಲಿ. ಕಾಶಿಯಲ್ಲಿ ನೆಲೆಸುವುದು ನಮಗೆ ಒಪ್ಪಿಗೆ, ಯಾರಿಲ್ಲದೆ ಹೋದರೂ ಅಲ್ಲಿ
ವಿಶ್ವೇಶ್ವರನಿರುತ್ತಾನೆ.”
“ಸಂತೋಷ. ನಿಮಗೆ ಆರು ಸಾವಿರ ಪವನು ವರ್ಷಾಶನ ಕೊಡಬೇಕೂಂತ ಕಂಪೆನಿ
ಸರಕಾರ ತೀರ್ಮಾನಿಸಿದೆ.”
“ಆರೇ ಸಾವಿರ ? ನಮ್ಮ ಪರಿವಾರದಲ್ಲಿ ಇನ್ನೂರು ಜನಕ್ಕಿಂತಲೂ ಹೆಚ್ಚಿದ್ದಾರೆ.”
“ಕೆಲವರನ್ನು ಇಲ್ಲೇ ಬಿಟ್ಟುಬಿಡಿ. ನೌಕರಿ ಕೊಡುತೇವೆ.”
“ಹೆತ್ತ ತಾಯಿಗೆ ಮಕ್ಕಳು ಹೊರೆಯಲ್ಲ. ಇವರೆಲ್ಲರೂ ನಮ್ಮ ಜತೆ ಬರುತಾರೆ.
ವರ್ಷಾಶನದ ವಿಷಯ ಮುಂದೆ ನೋಡಿಕೊಳ್ಳೋಣ.”
“ಒಳ್ಳೇದು. ನಿಮ್ಮ ದಾರಿ ಕಾವಲಿಗೆ ತುಕಡಿ ಸಿದ್ಧವಾಗಿದೆ."
“ಯಾವ ಪ್ರಸ್ತಾಪ ಮಾಡಬೇಕಾದರೂ ಯೋಗ್ಯ ಏರ್ಪಾಟು ಮೊದಲೇ ಮಾಡಿರು
ತೀರಿ ಅಲ್ಲವೆ ?"
“ನಾಳೆ ಹೊರಡುತೀರಾ ?”
“ಜೋಯಿಸರನ್ನು ಕರೆಸಿ ಮುಹೂರ್ತ ಇತ್ಯಾದಿ ನೋಡಬೇಕು.”
“ಅವಶ್ಯವಾಗಿ ಆಗಲಿ. ಮುಂದಿನ ಎರಡು ಮೂರು ದಿನಗಳಲ್ಲಿ ನೀವು ಯಾವತ್ತು
ಬೇಕಾದರೂ ಹೊರಡಬಹುದು.”

***

ಚನ್ನಬಸಪ್ಪ ಪತ್ನಿ ದೇವಮ್ಮಾಜಿಯೊಡನೆ ಬೆಂಗಳೂರಿಗೆ ಬಂದು ಕಂಪನಿ ಸರಕಾರದ
ಪ್ರತಿನಿಧಿಯೊಡನೆ, “ನಮ್ಮ ಗತಿಯೇನು ?” ಎಂದು ಕೇಳಿದ.
ದೊರೆತ ಉತ್ತರ:
“ಚಿಕವೀರರಾಜನ ಜತೆ ಕಾಶಿಗೆ ಹೋಗುತೀರೇನು?”
ಕೈಯಲ್ಲಿ ಬಂದೂಕು ಇದ್ದಿದ್ದರೆ ಆ ಅಧಿಕಾರಿಯನ್ನು ಚನ್ನಬಸಪ್ಪ ಅಲ್ಲಿಯೇ ಸುಟ್ಟು
ಬಿಡುತ್ತಿದ್ದ. ಈಗಲೂ ಕತ್ತು ಹಿಸುಕಿ ಕೊಂದುಬಿಡಲೇ ಎನಿಸಿತು. ಆತ ದೇವಮ್ಮಾಜಿ
ಯತ್ತ ನೋಡಿದ. ಅವಳ ಕಣ್ಣುಗಳಿಂದ ಕಂಬನಿ ಹರಿಯುತ್ತಿದ್ದುದನ್ನು ಕಂಡು ಧರೆಗಿಳಿದು
ಹೋದ.
ಇಳಿದನಿಯಲ್ಲಿ ಅವನೆಂದ :