ಪುಟ:ಸ್ವಾಮಿ ಅಪರಂಪಾರ.pdf/೧೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಸ್ವಾಮಿ ಅಪರಂಪಾರ ೧೭೫ ಪಕ್ಕದ ಕೊಠಡಿಯ ಕೈದಿ ಕೂಗಾಡಿದ:

"ಅದೇನ್ಮಾಡ್ತಿದೀಯೇ ಬೋ-ಮಗನೆ? ತಾರೋ ನೀರು!"
 ನೀರಿನ ಪಾತ್ರೆಯನ್ನು ಹಿಡಿದ ಅಪರಂಪಾರಸ್ವಾಮಿ ನಿಂತೇ ಇದ್ದ, ಅವನ ಪಾದಗಳು ಒಮ್ಮಿಂದೊಮ್ಮೆಲೆ ನೆಲಕ್ಕೆ ಬೇರು ಬಿಟ್ಟಿದ್ದುವು. ಮಾತನಾಡಿದ್ದವನು ಶಂಕರಪ್ಪ, ತನ್ನನ್ನು ಸೆರೆಯಿಂದ ಬಿಡಿಸಲು ಅವರು ಹಂಚಿಕೆ ಹೂಡಿದ್ದರು.
 ಡವಡವನೆಂದಿತು ಎದೆಗುಂಡಿಗೆ.
 ಮರುಕ್ಷಣವೇ ಹೊಸ ಯೋಚನೆಯಿಂದ ಉಸಿರು ಸರಾಗವಾಯಿತು.
 ಈ ಪ್ರಯತ್ನ ಯಶಸ್ವಿಯಾಯಿತೆಂದರೆ ತಾನು ಮತ್ತೆ ಕೊಡಗಿಗೆ ಹೋಗಬಹುದು; ಹೊರಾಟ ಮುಂದುವರಿಸಬಹುದು.
 ಆದರೆ, ಮಲ್ಲಪ್ಪ ಕೀಲಿ ಹೇಗೆ ತೆರೆಯುವ? ಗೋಡೆಯನ್ನೇರಿ ದಾಟುವುದು ಹೇಗೆ? ಅದರಾಚೆಗೆ, ಓಡಿಹೋಗಲು ಯಾವ ಏರ್ಪಾಟನ್ನು ಶಂಕರಪ್ಪ ಮಾಡುವ?
 ಆ ವಿವರವನ್ನು ಕೇಳಲು ಅವಕಾಶವೇ ದೊರೆಯಲಿಲ್ಲ, ಶಂಕರಪ್ಪ ಒಂದು ನಿಮಿಷ ಹೆಚ್ಚು ನಿಂತಿದ್ದರೂ ಉಳಿದವರಿಗೆ ಸಂದೇಹ ಬರುತ್ತಿತು.
 ನೀರಿನ ಪಾತ್ರೆಯನ್ನು ಅನ್ನದ ತಟ್ಟೆಯ ಬಳಿ ಇರಿಸಿ, ಕುಳಿತುಕೊಂಡು, ಅಪರಂಪಾರ ಯೋಚನಾಮಗ್ನನಾದ. 
 ಯೋಚನೆ ಶಿವಧ್ಯಾನದಲ್ಲಿ ಕೊನೆಗಂಡಿತು. ಅದು ಮುಗಿದಾಗ ಮನಸ್ಸು ಪ್ರಶಾಂತ ವಾಗಿತ್ತು.
 ಅಪರಂಪಾರನೆಂದುಕೊಂಡ :
 "ನಿನ್ನಿಚ್ಛೆ ಇದ್ದಂತಾಗುತದೆ ಮಹಾದೇವ."
 ...ಒಂದು ಯುಗವೆನ್ನುವಂತೆ ದೀರ್ಘವಾಗಿದ್ದ ಹಗಲು. ಎಷ್ಟು ಹೊತ್ತಾದರೂ ಕತ್ತಲೆಯೊಡನೆ ಬೆರೆಯಲು ನಿರಾಕರಿಸುತ್ತಿದ್ದ ಸಂಜೆ. ಕತ್ತಲಾದೊಡನೆಯೇ ಹೆಳವನಾಗಿ ಚಲಿಸಲೊಲ್ಲದ ಹೊತ್ತು.
 ಅಪರಂಪಾರ ಕ್ಷಣಗಳನ್ನೆಣಿಸಿದ, ಘಳಿಗೆ-ಜಾವಗಳನ್ನು.
 ಇಲ್ಲಿ ಈ ಜನ ವೇಳೆಯನ್ನು ಘಂಟೆಗಳಲ್ಲಿ ಎಣಿಸುತ್ತಿದ್ದರು. ಹನ್ನೆರಡಕ್ಕೆ ನಡುರಾತ್ರೆ, ಹನ್ನೆರಡಕ್ಕೆ ಮಧಾಹ್ನ, ಆರು ಅಂದರೆ ಬೆಳಿಗ್ಗೆ, ಆರು ಅಂದರೆ ಸಂಜೆ.
 ಒಂದು ಘಳಿಗೆಗೆ ಎಷ್ಟು ಘಂಟೆ? ಅಥವಾ, ಒಂದು ಘಂಟೆಗೆ ಎಷ್ಟು ಘಳಿಗೆ?
 ಅಕೋ ಹೊಡೆಯುತ್ತಿದ್ದಾನೆ: ಒಂದು, ಎರಡು, ಮೂರು..ಹತ್ತಕ್ಕೆ ನಿಂತಿತು.
 ಹತ್ತಾದ ಬಳಿಕ ಹನ್ನೊಂದು.
 ಹ-ನ್ನೊಂ-ದು.
 ಇನ್ನು ಹನ್ನೆರಡು.
 ಸೊಳ್ಳೆಗಳ ಗುಂಯಾರವ.. ದೂರದಲ್ಲೊಂದು ನಾಯಿ ಬಗುಳುತ್ತಿತ್ತು. ಪ್ರಾಕಾರದ ಮೇಲೆ ಪಹರೆ ನಡೆಸಿರುವವರ ಧ್ವನಿವಿನಿಮಯ :
 “ಅಲ್ ಬೇಲ್-ಅಲ್ ಬೇಲ್.” 
 ಅಪರಂಪಾರಸ್ವಾಮಿ ಕೈಬೆರಳುಗಳನ್ನು ಅಸಹನೆಯಿಂದ ಬಾರಿ ಬಾರಿಗೂ ಹಿಸುಕಿಕೊಂಡು ಸದ್ದುಮಾಡದೆ ಅತ್ತಿತ್ತ ನಡೆದ. -