ಪುಟ:ಸ್ವಾಮಿ ಅಪರಂಪಾರ.pdf/೧೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೧೭೬ ಸ್ವಾಮಿ ಅಪರಂಪಾರ

 ಘಂಟೆ.
 ಎಣಿಸುವ ಅಗತ್ಯವಿರಲಿಲ್ಲ, ಹನ್ನೊಂದಾದ ಬಳಿಕ ಹನ್ನೆರಡೇ ಆದರೂ ಅಪರಂಪಾರ ಎಣಿಸಿದ.
 ಸರಿಯಾಗಿತ್ತು.
 ರಪ್-ರಪ್ ರಪ-ರಪ್.
 ಪಾದರಕ್ಷೆಯ ಹೆಜ್ಜೆಗಳು. ಕಾವಲುಗಾರ. [ಮಲ್ಲಪ್ಪ?]
 ಸದ್ದು ಸ್ವಲ್ಪ ದೂರ ಕೇಳಿಸಿ, ನಿಂತುಹೋಗುತ್ತಿತ್ತು. ನಿಮಿಷ ಬಿಟ್ಟ ಮತ್ತೆ ಕೇಳಿಸಿ, ಇಲ್ಲವಾಗುತ್ತಿತ್ತು.
[ಅಲ್ಲಲ್ಲಿ ನಿಂತು ನಿಂತು ತಿರುತಿರುಗಿ ನೋಡಿ ಬರುತ್ತಿದ್ದಾನೆ.]
ರಪ್-ರಪ್ ರಪ್-ರಪ್.
 ಜಗಲಿಯಲ್ಲಿ ಮಂದಪ್ರಕಾಶ, ತಾನು ಕಾಣಿಸಿದಂತೆ ಬಾಗಿಲಿನಿಂದ ತುಸು ದೂರದಲ್ಲಿ ಅಪರಂಪಾರ ನಿಂತ. 
 ಹತ್ತಿರ ಬಂದು, ಕೋಣೆಯ ಮುಂದೆ ಕೊನೆಗೊಂಡ ಕಾಲ ಸಪ್ಪಳ.
 ಕಾವಲುಗಾರನ ಪೋಷಾಕು, ಕೈಯಲ್ಲಿ ಬಂದೂಕು, ಇವನಿಗೂ ಗಿರಿಜಾಮಿಾಸೆ.
 ಬೇರೆ ದಿನವಾಗಿದ್ದರೆ "ಮಲ್ಲಪ್ಪಣ್ಣ" ಎಂದು ಆತ್ಮೀಯವಾಗಿ ಕರೆಯಬಹುದಿತ್ತು.
 ಅಪರಂಪಾರ ನಿದ್ದೆಹೋಗಿಲ್ಲವಷ್ಟೆ ಎಂದು ಇಣಿಕಿನೋಡಿ, ನಿಂತಿದ್ದ ವ್ಯಕ್ತಿಯ ರೂಪು  ರೇಖೆಗಳನ್ನು ಕಂಡು ಸಮಾಧಾನಗೊಂಡು, ಆ 'ಕಾವಲುಗಾರ' ಮೆಲ್ಲನೆ ಕೊಠಡಿಯ ಬೀಗವನ್ನು ತೆರೆದ.                
 ರಪ್-ರಪ್ ರಪ್-ರಪ್.
 ಮುಂದಕ್ಕೆ ಹೊರಟುಹೋದ 'ಕಾವಲುಗಾರ.'
 ಅಪರಂಪಾರ ಬಲ್ಲ : ಎಡಕ್ಕೆ, ಮತ್ತೆ ಎಡಕ್ಕೆ.
 ತಾನು ಅವನನ್ನು ಹಿಂಬಾಲಿಸಬೇಕು...
 ['ಕ್ಷಣ ಬಿಟ್ಕೊಂಡು'...]
 ಅಪರಂಪಾರ ಬಾಗಿಲನ್ನು ಮುಟ್ಟಿದ. ಸ್ಪರ್ಶಮಾತ್ರಕ್ಕೇ ಅದು ಕಿರಿಚಿಕೊಂಡಿತು.
 [ಇತರರಿಗೆ ಎಚ್ಚರವಾಗದೆ ಈ ಸದ್ಧಿಗೆ?]
 ಏನು ಮಾಡಲಿ ತಾನು? ಇಷ್ಟೊಂದು ಸಪ್ಪಳವಾಗುತ್ತಿದೆಯಲ್ಲ?
 ರಪ್-ರಪ್ ರಪ್-ರಪ್.
 ಇದೇನು ? ಮಲ್ಲಪ್ಪ ಮತ್ತೆ ಬರುತ್ತಿರುವನೆ?
 ರಪ್-ರಪ್ ರಪ್-ರಪ್.
 ಅಲ್ಲ! ಇದು ಇತ್ತ ಕಡೆಯಿಂದ! ಬೇರೆ ಯಾವನೊ ಕಾವಲುಗಾರ.

ಆತ ದಾಟಿಹೋಗಿರುವವರೆಗೂ ಕಾದಿರಲೆ? ತನ್ನ ಬಾಗಿಲ ಕಡೆಗೆ ಅವನ ದೃಷ್ಟಿ ಹೊರಳಿದರೆ?

 "ಹುಚ್ಚಪ್ಪ! ಹೊಂಟೋಗು!"
 ಪಿಸುಮಾತು ಬಂದುದು ಮಗ್ಗುಲ ಕೊಠಡಿಯಿಂದ. ಅಂಥ ಭಾಗ್ಯ ತನಗಿಲ್ಲವೆಂದು ಕರುಬದೆ ಕೊಲೆಪಾತಕಿ ಕೈದಿ ಹೇಳುತ್ತಿದ್ದ: 'ಹೊರಟು ಹೋಗು!' -