ಪುಟ:ಸ್ವಾಮಿ ಅಪರಂಪಾರ.pdf/೨೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೨೦೦ ಸ್ವಾಮಿ అಪರಂಪಾರ

"ನೋಡಿದಿರಾ? ಅದನ್ನು ಕೊಡೋದು ನಿಮ್ಮ ಕೈಲಿಲ್ಲ, ಕೊಡೋದು ಯಾರ ಕೈಲೂ ಇಲ್ಲ, ಕಸಕೊಂಡರೇನೇ ಅದು ಸಿಗೋದು."

...ಅಪರಂಪಾರನ ಪಾಲಿಗೆ, ಪಂಜರದೊಳಗಿನ ಆ ಬದುಕು ಏಕಪ್ರಕಾರವಾಗಿತ್ತು. ಒಂಟಿ ಕೊಠಡಿಯ ಪ್ರತ್ಯೇಕ ಕಟ್ಟಡವಾಗಿದ್ದುದರಿಂದ ಹಗಲು ಸ್ವಲ್ಪ ಹೊತ್ತು ಬಾಗಿಲಿನ ಸರಳುಗಳೆಡೆಯಿಂದ ಸೂರ್ಯ ರಶ್ಮಿಗಳು ಒಳಕ್ಕೆ ಬರುತ್ತಿದ್ದುವು. ತಿಂಗಳಲ್ಲಿ ಕೆಲ ದಿನ ಚಂದ್ರ ಕಿರಣಗಳೂ ತೂರುತ್ತಿದ್ದುವು. ಮಳೆಗಾಲದಲ್ಲಿ ಇರಿಚಲು ಬೀಸಿ ನೀರು ಕೊಠಡಿಯೊಳಗೆ ಬರುತ್ತಿತ್ತು. ಅಂತಹ ರಾತ್ರೆ ಮಲಗಲು ಸ್ಥಳವಿರುತ್ತಿರಲಿಲ್ಲ. ಶಿವಧ್ಯಾನ ಮಾಡುತ್ತ ಅಪರಂಪಾರ ಕುಳಿತೇ ಇರುತ್ತಿದ್ದ. 'ಇದು ಶಿವರಾತ್ರಿ ಜಾಗರ' ಎನ್ನುತ್ತಿದ್ದ. ಅಡ್ಡಮಳೆ ಬಂದು ನೀರು ಜೋರಾಗಿ ಒಳಕ್ಕೆ ಸೀರಿದರೆ, ಮೈಯೊಡ್ಡಿ, 'ಕಾವೇರಿ ಸ್ನಾನ' 'ಗಂಗಾ ಸ್ನಾನ' ಎನ್ನುತ್ತಿದ್ದ. ಕ್ಯಾಂಪ್‍ಬೆಲ್ ಬಂದಾಗ ಆಗೊಮ್ಮೆ ಈಗೊಮ್ಮೆ ಆತ ವಿಚಾರಿಸುತ್ತಿದ್ದ :

"ಇವತ್ತು ಇಂಥ ವಾರ, ಇಂಥ ಮಾಸ, ಇಂಥ ಸಂವತ್ಸರ ಅಂದರೆ ನಿಮ್ಮ ಲೆಕ್ಕದಲ್ಲಿ ಇಂಥ ದಿನ, ಇಷ್ಟನೇ ತಿಂಗಳು, ಇಷ್ಟನೇ ವರ್ಷ, ಹೌದಾ ?" ಒಂದು ಸಲವೂ ಆತನ ಎಣಿಕೆ ತಪ್ಪಾಗಿರುತ್ತಿರಲಿಲ್ಲ.

ಮನಸ್ಸು ಮುದುಡಿಕೊಂಡ ವೇಳೆಯಲ್ಲಿ, 'ಯೋಚನೆಯ ಪಿಶಾಚಿಗಳೇ ಇನ್ನು ತೊಲಗಿ' ಎಂದು ಗದರಿ ನುಡಿದು, ಉಚ್ಚ ಕಂಠದಲ್ಲಿ ಅಪರಂಪಾರ ಶಿವಶರಣ-ಶರಣೆಯರ ವಚನ ಗಳನ್ನು ಅನ್ನುತ್ತಿದ್ದ. ತುಸು ದೂರದಲ್ಲಿದ್ದ ಕೊಠಡಿ ಸಾಲುಗಳಿಗೆ ಆ ಧ್ವನಿ ಕೇಳಿಸುತ್ತಿತ್ತು. ಕೈದಿಗಳು ತನ್ಮಯರಾಗಿ ಕಿವಿಗೊಡುತ್ತಿದ್ದರು. ಎಷ್ಟೋ ವೇಳೆ ಈತ ಹಾಡತೊಡಗುವುದನ್ನೇ ಆತುರದಿಂದ ಅವರು ಇದಿರು ನೋಡುತ್ತಿದ್ದರು. ಏಕಾಂತವೂ ಮೌನವೂ ದುಸ್ಸಹವಾದಾಗ ಅಪರಂಪಾರ ಒಮ್ಮೊಮ್ಮೆ ಗಟ್ಟಿಯಾಗಿ ಕೂಗಿ ನುಡಿಯುತ್ತಿದ್ದ: "ಎಲವೋ, ಎಲವೋ, ಪಾಪಕರ್ಮವ ಮಾಡಿದವನೇ ! ಆಗ ಕಾವಲುಗಾರರು "ಅಯ್ನೋರಿಗೆ ಉಚ್ಚಿಡಿದಂಗೈತಪೋ" ಎಂದು ಪರಿಹಾಸ್ಯ ಮಾಡುತ್ತಿದ್ದರು. ಹೀಗೆ ಎಷ್ಟೊಂದು ವರ್ಷಗಳು ಕಳೆದುವು! ...ದೇಶದಾದ್ಯಂತ ಬಂಡಾಯದ ಬರಸಿಡಿಲು ಎರಗಿದಾಗ, ಕಾವಲುಗಾರರ ಉತ್ಸು ಕತೆಯ ಗಾಬರಿಯ ಸಂವಾದಗಳಿಂದ ಗಂಭೀರವಾದುದೇನೋ ಹೊರಗೆ ನಡೆಯುತ್ತಿದೆ ಎಂದು ಅಪರಂಪಾರ ಊಹಿಸಿದ. ಅವನ ಚೇತನ ಕೆರಳಿತು. ಮನಸ್ಸು ಅಶಾಂತವಾಯಿತು. ಆತ ನಿದ್ದೆಗೆಟ್ಟ, ಇದ್ದಕ್ಕಿದ್ದಂತೆ ಸೆರೆಮನೆಯ ಗೋಡೆಗಳು ಕುಸಿಯಬಹುದು, ಪಾರಾಗಲು ತಾನು ಸಿದ್ಧನಿರಬೇಕು-ಎಂದುಕೊಂಡ.

ಆ ವಾರ ಕ್ಯಾಂಪ್‍ಬೆಲ್ ಬರಲಿಲ್ಲ. ಮತ್ತೊಂದು ವಾರ ಬಂದಾಗ, ಅಪರಂಪಾರ ಪಿಸು ದನಿಯಲ್ಲಿ ಕೇಳಿದ: "ವೈದ್ಯರೆ, ಹೊರಗೆ ಏನಾಗತಿದೆ?" ನಿರುತ್ಸಾಹದ ಧ್ವನಿಯಲ್ಲಿ ಕಾಂಪ್ ಬೆಲ್ ಎಂದ : "ಏನೂ ಇಲ್ಲ, ಸ್ವಾಮಿಜಿ.ಎಲ್ಲೋ ಉತ್ತರದಲ್ಲಿ ಗದ್ದಲ. ನಿಮ್ಮ ರಾಜ್ಯದಲ್ಲಾಗಲೀ ಇಲ್ಲಾಗಲೀ ಗಲಾಟೆಯಿಲ್ಲ."