ಪುಟ:ಸ್ವಾಮಿ ಅಪರಂಪಾರ.pdf/೨೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೨೦೪ ಸ್ವಾಮಿ ಆಪರಂಪಾರ

ನಡುವಯಸ್ಸು ದಾಟಿದ್ದ ನಿರ್ಭಾಗ್ಯೆ, ಕೂದಲೆಲ್ಲ ಬಿಳುಪು. ಆದರೆ ಮುಖದ ಮೇಲೆ ಒಂದೂ ಸುಕ್ಕೂ ಇರಲಿಲ್ಲ.

ಶೀತವೆ? ನೆಗಡಿಯೆ? ಜ್ವರವೆ?

—ಒಮ್ಮೆಯೂ ಕಾಹಿಲೆ ಮಲಗಿದವಳಲ್ಲ ಆಕೆ.

ಈ ಕೆಲ ವರ್ಷಗಳಲ್ಲಿ ಸದಾ ಹಾಸಿಗೆ ಹಿಡಿದಿರುತ್ತಿದ್ದ ದೇವಮ್ಮಾಜಿ ಅನ್ನುವುದಿತು :

"ನೀನು ಕಲ್ಲುಗುಂಡು ಕಣಮ್ಮ."

ಆ ಕಲ್ಲುಗುಂಡು ಒಮ್ಮಿಂದೊಮ್ಮೆಲೆ ಸಿಡಿದಿತ್ತು.

ಇದ್ದ ಕೆಲ ಆಳು ಕಾಳುಗಳೂ ಗುಲಾಮ ಪದ್ಧತಿ ನಿರ್ನಾಮವಾದ ಮೇಲೆ ಅಪ್ಪಂಗಳವನ್ನು ಬಿಟ್ಟು, ಕಾಫಿ ತೋಟಗಳಲ್ಲಿ ದುಡಿಯಲೆಂದು ಹೊರಟುಹೋಗಿದ್ದರು. ಒಬ್ಬನೇ ಒಬ್ಬ ವೃದ್ಧ, 'ನಾನು ಉಟ್ಟಿದ್ದೂ ಇಲ್ಲೇ, ಸಾಯೋದೂ ಇಲ್ಲೇ' ಎಂದು ಹಿಂದೆ ಉಳಿದಿದ್ದ.

ಹೀಗೆ, ಹೆಚ್ಚಿನ ಹೊರೆಯಾದ ಎಲ್ಲ ಕೆಲಸಗಳನ್ನೂ ರಾಜಮ್ಮಾಜಿ ಮಾಡುತ್ತಿದ್ದಳು. ತೊಳೆದು ಸಾರಿಸಿ ಮಲಗುವ ವೇಳೆಗೆ ನಡು ಇರುಳಾಗುತ್ತಿತು.

ಆ ರಾತ್ರೆ ಎಲ್ಲರೂ ಉಂಡರು. ಎಲ್ಲರೂ ಅಂದರೆ—ಚನ್ನಬಸಪ್ಪ, ದೇವಮಾಜಿ, ಅವರ ಯುವಕ ಮಗ [ಮಗಳನಾಗಲೇ ಮದುವೆ ಮಾಡಿಕೊಟ್ಟಿತ್ತು]-ವೃದ್ಧ ಆಳು ಮತ್ತು ರಾಜಮಾಜಿ.

"ಹೊಲದ ಕಡೆ ಹೋಗಿ ಬರತೀನಿ" ಎಂದು ಮಗ ಹೊರಬಿದ್ದ.

ಹೊಲ ಕಾಯುವುದೆಲ್ಲ ಸುಳ್ಳು; ಯಾವುದೋ ದುರ್ಜನರ ಸಂಗವಿರಬೇಕು–ಎಂಬ ಸಂದೇಹ ಚನ್ನಬಸಪ್ಪನಿಗೆ. ಆದರೆ ಹಾಗೆಂದು ಮಗನನ್ನು ಗದರಿಸಲಾರ.

"ಮುಂಡೇದು ಹಾಳಾಗಿ ಹೋಗತದೆ" ಎಂದು ಗೊಣಗುತ್ತ ಆತ ತನ್ನ ಕೊಠಡಿಗೆ ಹೋದ.

ದೇವಮ್ಮಾಜಿ, "ತಲೆನೋವು, ನಡನೋವು" ಎನ್ನುತ್ತ ಹಾಸಿಗೆಯ ಮೇಲೆ ಬಿದ್ದು ಕೊಂಡಳು.

ವೃದ್ಧ, "ಬಿಸಿ ಅಡಿಕೆ ನೀಡ್ರವ್ವಾ" ಎಂದು ಕೇಳಿ ಇಸಕೊಂಡು, ಬಾಗಿಲ ಬಳಿ ಬಿದ್ದಿದ್ದ ಚಪ್ಪಡಿ ಕಲ್ಲಿನ ಮೇಲೆ ಕುಟ್ಟತೊಡಗಿದ.

ರಾಜಮಾಜಿ ಕತ್ತಲಲ್ಲಿ ಹಿತ್ತಿಲಿಗೆ ಹೋಗಿ ಬಾವಿಯಿಂದ ನೀರು ಸೇದಿದಳು. ಭಾರವಾದ ಬಿಂದಿಗೆ. ಹೊತ್ತುಕೊಂಡು ಒಳಗೆ ಬಂದಿದ್ದಳಷ್ಟೆ, ಎದೆಯಲ್ಲೇನೋ ನೋವಾಯಿತು. ಲೆಕ್ಕಿಸದೆ ತೊಳೆಯುವ ಬಳೆಯುವ ಕೆಲಸದಲ್ಲಿ ತೊಡಗಿದಳು, ಮತ್ತೆ ನೋವು ಕಾಣಿಸಿಕೊಂಡಿತು. ತಾಳಲಾಗದೆ, "ಯಪ್ಪೊ ! ಯಪ್ಪೊ ! ನೋವು!" ಎಂದು ಕೂಗಿಕೊಂಡಳು.

ವೃದ್ಧ ಮನೆಯ ಬಳಿಗೆ ಬರುವುದು 'ಪೊಲೆ', ಹೊರಗೇ ನಿಲ್ಲಬೇಕು. ಅಲ್ಲಿಂದಲೇ ಆತ ಕೂಗಿದ :

"ಧಣೀರೇ! ಅಮ್ಮಣ್ಣಿ! ಬಿರ್ರನೆ ಬರ್ರಿ !" ರಾಜಮ್ಮಾಜಿಯ ರೋದನ ಹೆಚ್ಚಿತು. ಚನ್ನಬಸಪ್ಪನೂ ದೇವಮ್ಮಾಜಿಯೂ ಬಂದರು. "ಏನಾಯ್ತು ರಾಜಮ್ಮಾಜಿ? ಏನಾಯ್ತು ?” ಎಂದು ದೇವಮ್ಮಾಜಿ ಕೇಳಿದಳು.