ಪುಟ:ಸ್ವಾಮಿ ಅಪರಂಪಾರ.pdf/೨೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೨೦೬ ಸ್ವಾಮಿ ಅಪರಂಪಾರ

ವೃದ್ಧ ಅಂದ: "ಅದಾರೆ [ಮೇಲಕ್ಕೆ ಬೊಟ್ಟಮಾಡಿ] ಆ ಲೋಕದಾಗದಾರೆ. ಓಗಿ ನೋಡತೀಯಾ? ಇವತ್ತಿಗೆ ಎಂಟು ದಿವಸ ಆತು. ರಕ್ತಕಾರಿ ಸತ್ತೊದ್ರು ಆ ಮಾತಾಯಿ...ಅಯ್ಯೋ !"

                             ೭೩

ತಾನು ಹುಟ್ಟಿ ಬೆಳೆದ ಕೊಡಗು ಇದೆ ಏನು ?-ಎನ್ನುವಂತಾಯಿತು ಶಂಕರಪ್ಪನಿಗೆ, ದೇಶದ ಸ್ಥಿತಿಗತಿಗಳನ್ನು ಗಮನಿಸಿದಾಗ.

ಸಮಯ ಸಾಧಕರ ಸಂತತಿ ವಿಪುಲಗೊಂಡಿತ್ತು. ಆಳುವವರ ತಾಳಕ್ಕೆ ತಕ್ಕಂತೆ ಕುಣಿಯುವವರೇ ಎಲ್ಲರೂ. ಅದು ಇಷ್ಟವಾಗದವರು ತಮ್ಮ ಪಾಡಿಗೆ ತಾವಿದ್ದರು.

ಒಂದೆರಡು ಕಾಫಿ ತೋಟಗಳನ್ನೂ ಶಂಕರಪ್ಪ ಕಂಡ. ಅಲ್ಲಿ ಜನರನ್ನು ದನಗಳಂತೆ ದುಡಿಸಿಕೊಳ್ಳುತ್ತಿದ್ದರು. ಆಂಗ್ಲ ಮಾಲಿಕ ಕೈಯಲ್ಲಿ ಚಾಟಿ ಹಿಡಿದು ಕುದುರೆಯ ಮೇಲೆ ಅತ್ತಿತ್ತ ಹೋಗುತ್ತಿದುದನ್ನು ಕಂಡಾಗ ಶಂಕರಪ್ಪನ ಕಣ್ಣುಗಳಿಂದ ಕಿಡಿ ಕಾರಿತು.

ಆತ ಬೆಂಗಳೂರಿಗೆ ಹಿಂತಿರುಗಿದ : “ಕಾಫಿ ತೋಟದ ಕೆಲಸ ನಮಗೆ ಹೇಳಿದ್ದಲ್ಲ" ಎಂದು ಹೆಂಡತಿಗೆ ತಿಳಿಸಿದ. ...ದಿವಾನ ಲಕ್ಶ್ಮೀನಾರಯಣನ ಮಕ್ಕಳು ತಮ್ಮ ವೃದ್ಧ ತಂದೆಯ ಬಿಡುಗಡೆಗಾಗಿ ಪ್ರಯತ್ನ ನಡೆಸಿದ್ದರು. ಮೈಸೂರಿನ ಅರಸನಿಗೂ ಆಂಗ್ಲ ಪ್ರತಿನಿಧಿ ಬೌರಿಂಗನಿಗೂ ಅವರು ಮನವಿಗಳನ್ನು ಸಲ್ಲಿಸಿದರು.

"ಇದು ಕೊಡಗಿಗೆ ಸಂಬಂಧಿಸಿದ ವಿಷಯ" ಎಂದ ಕೃಷ್ಣಭೂಪಾಲ.

ಲಕ್ಶ್ಮೀನಾರಯಣನ ಮಕ್ಕಳು, "ನಾವೀಗ ಬೆಂಗಳೂರಲ್ಲಿ ನೆಲೆಸಿದ್ದೇವೆ. ಶ್ರೀಮನ್ಮಹಾರಾಜರ ಪ್ರಜೆಗಳಾಗಿದ್ದೇವೆ" ಎಂದರು.

ಕೃಷ್ಣಭೂಪಾಲ ಅವರ ಮನವಿಯನ್ನು, "ಕೊಡಗಿನ ಪ್ರಕರಣ. ಖಾವಂದರಿಗೆ ಸೇರಿದ್ದು. ಕನಿಕರ ತೋರಿಸಬಹುದೇನೋ-ಅಂತ ತಮ್ಮಲ್ಲಿಗೆ ಕಳುಹಿಸುತ್ತಿದ್ದೇವೆ" ಎಂದು ಬೌರಿಂಗನಿಗೆ ತಲಪಿಸಿದ.

“ಕೊಡಗು! ಓ! ಆ ಕಪಾಟದಲ್ಲಿ ಇನ್ನೂ ಎಲುಬು ಗೂಡುಗಳು ಉಳಿದಿವೆಯೇನು?” ಎಂದು ಬೌರಿಂಗ್, ಹಳೆಯ ದಾಖಲೆಗಳನ್ನು ತರಿಸಿದ.

"ಡಾಕ್ಟರ್, ಈ ಕೈದಿಯ ಬಗ್ಗೆ ಒಂದು ವೈದ್ಯಕೀಯ ವರದಿ ಬೇಕು" ಎಂದು ಕ್ಯಾಂಪ್‍ಬೆಲ್ಲ್ಗೆ ತಿಳಿಸಿದ.

ಲಕ್ಶ್ಮೀನಾರಯಣ ಮುದುಕ; ಆರೋಗ್ಯವೂ ಸರಿಯಾಗಿಲ್ಲ–ಸಾಕ್ಷ್ಯ ನುಡಿಯಿತು ಕ್ಯಾಂಪ್‍ಬೆಲ್‍ನ ವರದಿ.

ಅದರಲ್ಲಿ ಮತ್ತೂ ಒಂದು ವಿಷಯವಿತ್ತು : "ಇನ್ನೂ ಒಬ್ಬ ವೃದ್ಧ ಕೈದಿಯ ವಿಚಾರವಾಗಿ ತಮ್ಮ ಗಮನ ಸೆಳೆಯಬೇಕಾಗಿದೆ. ಇವನ ಹೆಸರು ಅಪರಂಪಾರಸ್ವಾಮಿ, ಅಂತ. ಕುರುಡ. ಒಂದು ವರ್ಷದ ಹಿಂದೆ ಅವನಿಗೊಂದು ಕೆಟ್ಟ ಕನಸು ಬಿದ್ದಿತಂತೆ. ಅಂದಿನಿಂದ ಒಂದೇ ಸಮನೆ ಕೃಶವಾಗುತ್ತಿದ್ದಾನೆ. ಇವನನ್ನೂ ಬಿಟ್ಟುಬಿಡಬಹುದು ಅಂತ ತೋರುತದೆ.” ಬೌರಿಂಗ್ ವೈದ್ಯನ ವರದಿಯನ್ನು ಪರಿಶೀಲಿಸಿ, ಕೊಡಗಿನ ಕಡತಗಳನ್ನು ಮತ್ತೊಮ್ಮೆ