ಪುಟ:ಸ್ವಾಮಿ ಅಪರಂಪಾರ.pdf/೨೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

 ಸಾಮಿ ಅಪರ೦ಪಾರ ೨೦೭

ತೆರೆದು ನೋಡಿದ. ಅಪರಂಪಾರನ ಇತಿಹಾಸ ಸ್ವಾರಸ್ಯವಾಗಿತ್ತು. ಓದಿ ಅವನೆಂದ: "ಹು೦ ! ಇವನು ಫಕೀರ. ದಿಕ್ಕಿಲ್ಲದವನು. ಬಿಡುಗಡೆ ಮಾಡಿ ಅಂತ ಯಾರು ಬೇಡುತಾರೆ? ಈ ಮುದುಕರನ್ನೆಲ್ಲ ಇಲ್ಲಿ ಯಾವ ಲೌಕಿಕ ಪ್ರಯೋಜನಕ್ಕೆ ಇಟ್ಟುಕೊಂಡಿದಾರೋ ಕಾಣೆ."

ಕೊಡಗಿನ ಈ ಕೈದಿಗಳನ್ನು ಬಿಡುಗಡೆ ಮಾಡಬಹುದು–ಎಂದು ಬೌರಿಂಗ್ ಆಜ್ಞೆ ಹೊರಡಿಸಿದ.

...ಬರಬೇಕಾದ ದಿನಕ್ಕಿಂತಲೂ ಮುಂಚೆಯೇ ಪರಿಚಿತ ಬೂಟುಗಳ ಸಪ್ಪಳ ಕೇಳಿ ಅಪರಂಪಾರನಿಗೆ ಆಶ್ಚರ್ಯವಾಯಿತು.

"ಶರಣು ಸ್ವಾಮಿಜಿ." "ಶರಣು ವೈದ್ಯರೆ." ವೈದ್ಯನ ಧ್ವನಿಯಲ್ಲಿ ಕಂಪನವಿತ್ತು. "ನಿಮಗೊಂದು ಸಿಹಿ ಸುದ್ದಿ ತಂದಿದೇನೆ." "ನಿಮ್ಮ ಔಷಧವಷ್ಟೇ ಕಹಿ. ಮಾತು ಯಾವಾಗಲೂ ಸಿಹೀನೇ ಅಲ್ಲವಾ ?" "ನಿಮ್ಮನ್ನು ಬಿಡುಗಡೆ ಮಾಡುತಾರೆ."

ಅಪರಂಪಾರನ ತುಟಿಗಳು ಬಿಗಿದುಕೊಂಡುವ. ಗವಿಗಳ ಮೇಲೆ ಎವೆಯ ಅವಶೇಷಗಳು ಪಟಪಟನೆ ಬಡಿದವು.

ಕ್ಯ್ಂಪ್‍ಬೆಲ್ಲ್ ಮತ್ತೆ ಅಂದ: "ಇನ್ನು ನೀವು ಸ್ವತಂತ್ರರು. ಸ್ವಲ್ಪ ಹೊತ್ತಿನಲ್ಲೇ ಬಿಟ್ಟಬಿಡುತಾರೆ." ಅಪರಂಪಾರ ತುಟಿ ತೆರೆದ : "ಇದೂ ಒಂದು ಇರಲಿ ಎನ್ನುತಾನಾ ಮಹದೇವ ? ಈ ಸೆರೆಮನೆಯಿಂದ ಇನ್ನೊಂದು ಸೆರೆಮನೆಗಾ ನಮಗೆ ಬಿಡುಗಡೆ?...ನಮ್ಮ ಸಹವಾಸ ನಿಮಗೆ ಸಾಕಾಯಿತಾ ವೈದ್ಯರೆ?"

"ಹಾಗಲ್ಲ, ಸ್ವಾಮಿಜಿ. ಅಗಲಿಕೆ ಯಾವಾಗಲೂ ಬೇಸರದ ಸಂಗತಿ. ಆದರೆ, ಸೆರೆ ಮನೆಯಿಂದ ನೀವು ಹೊರಹೋದಿರಿ ಅಂದರೆ ನನಗೆಷ್ಟೋ ಸಮಾಧಾನ."

"ಇವನನ್ನ ಬಿಡಿ–ಅಂತ ನೀವೇ ಸಲಹೆ ಮಾಡಿದಿರಾ ?" "ಅದು ದೊಡ್ಡದಲ್ಲ. ಹೇಳಿ, ಸ್ವಾಮಿಜಿ, ನಿಮಗೇನಾದರೂ ಸಹಾಯ ಬೇಕೆ?” "ಸಹಾಯ ? ಹ್ಞ. ಮೂವತ್ತೆರಡು ವರ್ಷ ಆಯಿತು ಇಲ್ಲಿಗೆ ಬಂದು. ಒಮ್ಮೆಯೂ ನಿಮ್ಮನ್ನು ಏನೂ ಕೇಳಲಿಲ್ಲ. ಎಲ್ಲ ಹತ್ತಿರ ಬನ್ನಿ. ನಿಮ್ಮನ್ನಷ್ಟು ಸರಿಯಾಗಿ ನೋಡ ಬೇಕು."

ಅಪರಂಪಾರ ನಡುಗುವ ಬೆರಳುಗಳನ್ನು ಸರಳುಗಳ ಹೊರಗೆ ತೂರಿ ವೈದ್ಯನ ತಲೆ ಮುಖ ಭುಜಗಳನ್ನು ಮುಟ್ಟಿದ. "ಮುಖದ ಗೆರೆಗಳು ಆಳವಾಗಿವೆ. ನನ್ನ ಹಾಗೆಯೇ ಮುದುಕರಾದಿರಿ, ಅಲ್ಲ ? ಒಳ್ಳೇದು. ನನಗೆ ನಾಪಿತನ ಸೇವೆ ದೊರಕಿಸಿ ಕೊಡಿ. ಯಾರಾದರೂ ತಲೆಯ ಮೇಲೆ ಎರಡು ಬಿಂದಿಗೆ ನೀರು ಸುರಿಯಲಿ. ಈ ವಸನಗಳನ್ನು ಇಲ್ಲಿಯೇ ತ್ಯಜಿಸುತೇನೆ. ನಮಗೊಂದು ನಿಲುವಂಗಿ-ಜೋಳಿಗೆ ಕೊಡಿಸಿ. ಇದೇ ನೀವು ಮಾಡಬೇಕಾದ ಸಹಾಯ." ಭಾವೋದ್ವೇಗವನ್ನು ಬಯಲುಗೊಳಿಸುತ್ತಿದ್ದ ಧ್ವನಿಯಲ್ಲಿ ಕ್ಯಾಂಪ್‍ಬೆಲ್ಲ್ ನುಡಿದ :