ಪುಟ:ಸ್ವಾಮಿ ಅಪರಂಪಾರ.pdf/೨೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೨೦೮ ಸ್ವಾಮಿ ಅಪರಂಪಾರ

"ಆಗಲಿ ಒಂದು ಊರುಗೋಲೂ ಬೇಡವೇ ? " "ಆಞ ! ನಾನು ಕುರುಡ ಅಲ್ಲವಾ ?" "ಇಲ್ಲಿಂದ ಎಲ್ಲಿಗೆ ಹೋಗುತೀರಿ, ಸ್ವಾಮಿಾಜಿ?" "ಎಲ್ಲಿಗೆ?! ಕೊಡಗಿಗೆ!"

"ದೂರದ ಪ್ರಯಾಣ, ಸಾಧ್ಯವಿದ್ದರೆ ಏರ್ಪಾಟು ಮಾಡುತ್ತಿದ್ದೆ. ಆದರೆ ನನಗೆ ಅಧಿಕಾರವಿಲ್ಲ." "ನಾನು ನಡೆಯೆನೆ? ನೋಡುತ್ತಿರಿ. ನನ್ನ ಕಾಲುಗಳಿಗೆ ರೆಕ್ಕೆ ಹುಟ್ಟುತವೆ."

"ಬೇಕಿದ್ದರೆ ಇಲ್ಲಿಯ ಮಠಕ್ಕೆ ಸಿಪಾಯರು ನಿಮ್ಮನ್ನು ಒಯ್ದು ಮುಟ್ಟಿಸುವ ಹಾಗೆ ವ್ಯವಸ್ಥೆ ಮಾಡುತೇನೆ."

"ವೀರಜoಗವುನಿಗೆ ರಾಜಪಹರೆ ! ಆಗಲಿ, ಆಗಲಿ," "ನೀವು ಕೇಳಿರುವುದೆಲ್ಲ ಬರುತದೆ. ಇನ್ನು ನಮ್ಮ ನಿಮ್ಮ ಭೇಟಿಯಿಲ್ಲ. ನಾನು ಬರಲಾ? ದೇವರು ನಿಮ್ಮನ್ನು ರಕ್ಷಿಸಲಿ !"

ಆರ್ತನಾದದಂತಿದ್ದ ಧ್ವನಿಯಲ್ಲಿ ಅಪರಂಪಾರನೆಂದ: "ಬರುತೀರಾ ಶಿವ ? ಬರುತೀರಾ ? ಬರುತೀರಾ ?"

                            ೨೪

ಸೊರಗಿದ ಎತ್ತರದ ದೇಹ. ದೃಷ್ಟಿವಿಹೀನ. ಮೊಣಕಾಲುಗಳನ್ನು ಮುಚ್ಚಿ ಕೆಳಗಿಳಿದಿದ್ದ ಹೊಚ್ಚ ಹೊಸ ನಿಲುವಂಗಿ ; ಜೋಳಿಗೆ, ಹಾವುಗೆಗಳು. [ಅಪರಂಪಾರ ಕೇಳಿರದೆ ಇದ್ದರೂ ಆ ವೈದ್ಯ ಅವನ್ನು ಒದಗಿಸಿದ್ದ.] ನಡೆಗೋಲು.

ಎಡಬಲಗಳಲ್ಲಿದ್ದ ಸಿಪಾಯರೆನ್ನುತ್ತಿದ್ದರು : "ಆಚೆ, ಈ ಕಡೆಗೆ." ತಾನು ಕುರುಡನಲ್ಲ ಎನ್ನುವಂತೆ ಅಪರಂಪಾರ ನಡೆದ, ಎಡವುತ್ತ ನಡೆದ. "ಕೈ ಹಿಡಿಯಲಾ ?” ಎಂದ ಒಬ್ಬ ಸಿಪಾಯಿ. "ಬೇಡ !" ಇಕ್ಕೆಲಗಲ್ಲೂ ಜನ ನಿಂತು ಆ ದೃಶ್ಯವನ್ನು ನೋಡಿದರು. ಕುರುಡ ಜಂಗಮ ಯಾರು ಎಂದು ಅವರಿಗೆ ತಿಳಿಯದು.

"ಕಳವು ಗಿಳವು ಮಾಡಿದ್ದಾನು. ಹಿಡಕೊಂಡು ಹೋಗ್ತಿದ್ದಾರೆ" ಎಂದರು ಒಬ್ಬಿಬ್ಬರು. ಅವರು ಅರ್ಧ ದಾರಿ ನಡೆದಿದ್ದರಷ್ಟೆ, ಒಮ್ಮೆಲೆ ಅಪರಂಪಾರ ನಿಂತ. "ಯಾರೋ ಕರೀತಾ ಇದಾರೆ" ಎಂದ, ಆತ ಗಟ್ಟಿಯಾಗಿ. ಯಾರೂ ಇರಲಿಲ್ಲ. ಪುನಃ ಅವರು ನಡೆಯತೊಡಗಿದರು. ಅಷ್ಟರಲ್ಲೆ ಕಡಲೆಪುರಿ ಮೂಟೆಯನ್ನು ಬೆನ್ನ ಮೇಲೆ ಹಾಕಿದ್ದವನೊಬ್ಬ, “ಸ್ವಾಮಿ ಯೋರೆ, ಸ್ವಾಮಿಯೋರೇ!" ಎಂದು ಕೂಗುತ್ತ ಜನರ ಗುಂಪನ್ನು ಛೇದಿಸಿಕೊಂಡು ರಸ್ತೆಯ ಒಂದು ಮಗ್ಗುಲಿಂದ ಓಡಿಬಂದ. ಅಪರಂಪಾರ ನಿಂತ.