ಪುಟ:ಸ್ವಾಮಿ ಅಪರಂಪಾರ.pdf/೨೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಸ್ವಾಮಿ ಅಪರಂಪಾರ

೨೧೧

“ಗತಿಗೆಟ್ಟು ಧೃತಿಗೆಟ್ಟು ಮತಿಗೆಟ್ಟವ ನಾನಯ್ಯಾ, ನಡೆವರೆ ಶಕ್ತಿಯಿಲ್ಲ ನುಡಿವರೆ
ಜಿಹ್ವೆಯಿಲ್ಲ..."
ದಾರಿಯುದ್ದಕ್ಕೂ ಅಲ್ಲಲ್ಲಿ ಅವರು ತಂಗುತ್ತ ನಡೆದರು.
ಅಪರಂಪಾರನ ಅಸಹಾಯ ಸ್ಥಿತಿಯನ್ನು ನೋಡುತ್ತ ಶಂಕರಪ್ಪ ಚಿಂತೆಗೀಡಾದ.
“ಹೀಗೆ ಏಸು ದಿನ ಸಾಧ್ಯ ಆದಾತು ?'
ಹತ್ತು ದಿನ ನಡೆದ ಬಳಿಕ ಶ್ರೀರಂಗಪಟ್ಟಣ ಬಂತು.
ಅಪರಂಪಾರನೆಂದ:
“ಸಿದ್ದಲಿಂಗನ ಇಲ್ಲೇ ಸೆರೆಯಲ್ಲಿ ಕೂಡಹಾಕಿದರು. ಆ ಅಯ್ಯ ಈಗ ಇರಲಾರ
ಅನಿಸತದೆ.”
“ಇಲ್ಲಿಂದ ಕಾಲುದಾರಿಯಾಗಿ ಪರಿಯಾಪಟ್ಟಣಕ್ಕೆ ಹೋಗೋಣವೆ ? ಅಲ್ಲ__
ಮೈಸೂರಿಗಾಗಿ.”
“ಮೈಸೂರಿಗೆ ಬೇಡ, ಕೃಷ್ಣರಾಜ ಒಡೆಯರು ಆಳುತಿದಾರೆ ಅಂದೆಯಲ್ಲ? ಅವರಿಗೆ
ಯಾಕೆ ತೊಂದರೆ ? ಒಂದು ಕಾಲದಲ್ಲಿ ಅರಮನೆಯ ಕೈದೋಟದಲ್ಲಿ ಅವರ ಕಂಡಿದ್ದೆ ಅಂತ
ಹೇಳಿಕೊಳ್ಳಲೇ ?... ಅದಕ್ಕಲ್ಲ ಬಸಪ್ಪಾಜಿ ಅರಸರ ನೋಡೋದಕ್ಕೆ__ಅನ್ನಬೇಡ. ಅವರ
ಇಳಿ ವಯಸ್ಸಿನಲ್ಲಿ ಹಳೆಯ ನೆನಪನ್ನು ಯಾಕೆ ಮಾಡಿಕೊಡಲಿ ? ನಮ್ಮ ಹತ್ತರ ಯಾವ
ರಾಜಕಾರ್ಯ ಇದೆ ಅವರ ಜತೆ ಚರ್ಚಿಸೋಕೆ ?”
ಕಾವೇರಿಯಲ್ಲಿ ಮಿಂದು, ಕಾಲುಗಳನ್ನೆಳೆದುಕೊಂಡು, ಪೆರಿಯಾಪಟ್ಟಣದತ್ತ ಅವರು
ನಡೆದರು.
“ದಾರಿ ನೆನಪಾಗತಾ ಇದೆ, ಶಂಕರಪ್ಪ, ಆ ! ಇದು ಕೊಡಗಿನ ಕಡೆಯಿಂದ ಬೀಸು
ತಿರೋ ಗಾಳಿ, ನೋಡಿದೆಯಾ, ಸುವಾಸನೆ !”
“ಉತ್ತರ ದಿಕ್ಕಿಗೆ ಹೋದರೆ ಬೆಟ್ಟದಪುರ ತಲಪುತ್ತೇವೆ, ಸ್ವಾಮಿಯವರೆ.”
“ಬಲ್ಲೆ. ಆದರೆ, ಹೋಗಿ ಏನು ಮಾಡಲಿ ? ಏನೂಂತ ಹೇಳಲಿ ಮಲ್ಲಿಕಾರ್ಜುನನಿಗೆ?”
...ಸಿದ್ದೇಶ್ವರ ಘಟ್ಟ ಬಂದಿತು.
“ಕೊಡಗಿನ ನೆಲ, ಸ್ವಾಮಿಯವರೆ.”
"ಹಾ! ತಾಳು !”
ಅಪರಂಪಾರ ಹಾವುಗೆಗಳನ್ನು ಕಳಚಿದ, ನೆಲಕ್ಕೆ ಸಾಷ್ಟಾಂಗ ಪ್ರಣಾಮ ಮಾಡಿದ.
ಒಂದು ಹಿಡಿ ಮಣ್ಣನ್ನು ಅಂಗೈಯಲ್ಲೆತ್ತಿಕೊಂಡು ಅದನ್ನು ಚುಂಬಿಸಿದ. ತಲೆಯ ಮೇಲೆ
ಧರಿಸಿಕೊಂಡ.
“ಇನ್ನು ನಡೆ.”
ಆ ರಾತ್ರೆ ಅಪರಂಪಾರನ ಮೈ ಬಿಸಿಯಾಯಿತು.
“ಸ್ವಲ್ಪ ದಿನ ಇಲ್ಲೇ ಇದ್ದು ಪಯಣ ಮುಂದರಿಸಾನ, ಆಗದಾ ಸ್ವಾಮಿಯೋರೆ ?”
“ಛೇ! ಛೇ ! ಇಷ್ಟಕ್ಕೆಲ್ಲ ಭಯವೇ ? ಕೈ ಹಿಡಿ.
ಎಬ್ಬಿಸು.”
“'ಹಾಲೇರಿಗಲ್ಲವ ?”
“ಇನ್ನೆಲ್ಲಿಗೆ ?”
“ನಂಜರಾಜಪಟ್ಟಣದಲ್ಲಿ ಈಗ ಯಾರೂ ಇಲ್ಲ.”