ಪುಟ:ಸ್ವಾಮಿ ಅಪರಂಪಾರ.pdf/೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬. ಸ್ವಾಮಿ ಅಪರಂಪಾರ "ಇಲ್ಲಪೋ, ಇನ್ನೂ ಉಸಿರಾಡಾ ಅದೆ." ನಡುವಿರುಳಿನ ಹೊತ್ತಿಗೆ ಸ್ವಲ್ಪ ಹೊತು ಪವಡಿಸಲು ಮುಖ್ಯಸ್ಥ ಸಿದ್ಧತೆ ಮಾಡಿ ಕೊಳ್ಳುತ್ತಿದ್ದಂತೆ, ಕಾವಲುಗಾರನೊಬ್ಬ ಧಾವಿಸುತ್ತ ಬಂದ. ಅವನ ಧ್ವನಿಯಲ್ಲಿ ಕಾತರವಿತ್ತು. "ಒಬ್ಬರದನಕ ಸದ್ದಿಲ್ಲ. ಎರಡನೆಯವರು ಕೈಕಾಲು ಬಡೀತವರೆ. ಇರಲಿ, ನೀನು ಹೋಗು-ಎಂದು ಹೇಳಬೇಕೆನಿಸಿತು ಮುಖ್ಯಸ್ಥನಿಗೆ. ಆದರೆ ಆ ಇಬ್ಬರು ಕಣು ಮುಚ್ಚಿದರೊ? ಸನ್ನಿಧಾನಕ್ಕೆ ಸುದ್ದಿಮುಟ್ಟಿಸುವುದು ತಡವಾಗಬಾರದು, ನೋಡಿ ಬರುವುದೇ ಮೇಲು–ಎಂದುಕೊಂಡು, ಮುಖ್ಯಸ್ಥ ಕಾವಲುಗಾರನನ್ನು ಹಿಂಬಾಲಿಸಿದ. ಇನ್ನೊಬ್ಬ ಕಾವಲುಗಾರ ಬಾಗಿಲಕಿಂಡಿಯನ್ನು ಸರಿಸಿ ಕಂದೀಲಿನ ಬೆಳಕನ್ನು ಒಳಕ್ಕೆ ಹಾಯಿಸಿದ. ಮುಖ್ಯಸ್ಥ ಇಣಿಕಿ ನೋಡಿದ. ಒಂದು ದೇಹ ಮಿಸುಕುತ್ತಿರಲಿಲ್ಲ, ಚಡಪಡಿ ಸುತ್ತಿದ್ದ ಇನ್ನೊಂದರ ಕಣಾಲಿಗಳು ಛಾವಣಿಯನ್ನು ದಿಟ್ಟಿಸುತ್ತಿದ್ದುವು. ಮುಖದ ಮೇಲೆ ಬೆಳಕು ಬಿದ್ದುದನ್ನೂ ಆ ಜೀವ ಗಮನಿಸಲಿಲ್ಲ. ಗಂಟಲಿನಿಂದ ಗೊಗ್ಗರ ಧ್ವನಿ ಹೊರಟಿತು. 'ನೀರು' ಎಂಬ ಕ್ಷೀಣ ಪದವೊಂದು ಅಲೆಯುತ್ತ ಕೊಠಡಿಯನ್ನು ತುಂಬಿತು. ನಿಟ್ಟುಸಿರು ಬಿಡಲೆಂದು ಮುಖ್ಯಸ್ಥ ಉಸಿರೆಳೆದುಕೊಳ್ಳುತ್ತಿದ್ದಂತೆಯೇ ಆ ಶರೀರದ ಎದೆ ಗೂಡು ಮೇಲ್ಮೊಗವಾಗಿ ಸೆಟೆಯಿತು. ಕ್ಷಣಾರ್ಧದಲ್ಲಿ ಮೈ ನಿಡಿದುಕೊಂಡಿತು. ತಲೆ ಮಗ್ಗುಲಿಗೆ ವಾಲಿತು. ಆ ಕೈದಿಯ ಕಥೆ ಮುಗಿಯಿತು-ಎಂದು ತೋರಿತು ಮುಖ್ಯಸ್ಥನಿಗೆ. ಆತ ತನ್ನ ನಡುವಿನಲ್ಲಿದ್ದ ಕೀಲಿ ಕೈಗಳ ಗೊಂಚಲಿನಿಂದ ಒಂದನ್ನಾರಿಸಿ ಬೀಗವನ್ನು ತೆರೆದ. ಬಾಗಿಲು ಕಿದ್ರೆಂದು ಸದ್ದುಮಾಡುತ್ತ ಒಳಮೊಗವಾಗಿ ಸರಿಯಿತು. ಒಳಕ್ಕೆ ಕಾಲಿರಿಸಿದವರನ್ನು ದುರ್ವಾಸನೆ ಇದಿರುಗೊಂಡಿತು. ಆಗ ತಾನೇ ಅಸುನೀಗಿದವನನ್ನು ಮುಖ್ಯಸ್ಥ ಮುಟ್ಟಿ ನೋಡಿದ. ನಾಡಿ ಬಡಿತ ನಿಂತಿತ್ತು. ಮೈ ತಣ್ಣಗಿತ್ತು. ಇನ್ನೊಬ್ಬನಂತೂ ಸಂಜೆಯ ವೇಳೆಗೇ ಶವವಾಗಿರಬೇಕು. ಮಂಡಿಯೂರಿದ್ದ ಮುಖ್ಯಸ್ಥ ಗಡಬಡಿಸಿ ಎದ್ದು, ಕಾವಲುಗಾರನೊಡನೆ ಹೊರಬಂದ. ಕೊಠಡಿಯ ಬಾಗಿಲನ್ನು ಪುನಃ ಭದ್ರಗೊಳಿಸಿದ. ಗಟ್ಟಿಯಾಗಿ ಯೋಚಿಸುತ್ತ ಅವನೆಂದ: "ಸನ್ನಿಧಾನಕ್ಕೆ ಅರಿಕೆ ಮಾಡ್ಬೇಕು. ಆದರೆ ಈ ಅಪರಾತ್ರೆಯಾಗೆ ಎಬ್ಬಿಸೋಣ ಹ್ಯಾಗೆ? .ಬಸವಯ್ಯನವರು ಅರಮನೆಯಾಗೇ ಇದ್ದರೆ ಚೆಂದಾಯ್ತು, ಇಲ್ಲದಿದ್ದರೊ?" ಬದುಕಿದ್ದವರಿಗಿಂತಲೂ ಸತ್ತವರು ಹೆಚ್ಚು ಅಪಾಯಕರ ಎನ್ನುವಂತೆ ಮುಖ್ಯಸ್ಥ ಕಂಪಿಸುತ್ತಿದ್ದ ಸ್ವರದಲ್ಲಿ ಆಜ್ಞಾಪಿಸಿದ : "ಭದ್ರ! ಹುಷಾರಾಗಿರಿ! ತಲೆ ಹೋದಾತು...” ಆತ ಬೇಗ ಬೇಗನೆ ಕಾಲಿರಿಸುತ್ತ ಅರಮನೆಯ ಪಶ್ಚಿಮದ್ವಾರದ ಕಡೆಗೆ ನಡೆದ, ಅಲ್ಲಿ ಸೇವಕರನ್ನು ಹಿಂಬಾಲಿಸಿ, ಬಸವ ಮಲಗಿದ್ದ ಕೊಠಡಿಯನ್ನು ಕೆಲವೇ ನಿಮಿಷಗಳಲ್ಲಿ ಸೆರೆಮನೆಯ ಮುಖ್ಯಸ್ಥ ತಲಪಿದ. ಬಸವನೂ ಕಾರ್ಯಕಾರ ಐಯಣ್ಣನೂ ಗಾಢನಿದ್ದೆ ಯಲ್ಲಿದ್ದರು. ಐಯಣ್ಣನನ್ನೇ ಎಬ್ಬಿಸುವುದು ಮೇಲು - ಎಂದು ಮುಖ್ಯಸ್ಥ ಬಾಗಿ, ಮೈಮುಟ್ಟಿ, ಎರಡು ಮೂರು ಸಾರೆ ಕರೆದ: