ಪುಟ:ಸ್ವಾಮಿ ಅಪರಂಪಾರ.pdf/೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೭೮ ಸ್ವಾಮಿ ಅಪರಂಪಾರ

 "ಯಾಕೆ ಬರತಾರೆ? ಆವತ್ತೇ, ಕರಿಯನಿತ್ತೊಡೆ ಒಲ್ಲೆ, ಸಿರಿಯನಿತ್ತೊಡೆ ಒಲ್ಲೆ, ಹಿರಿದಪ್ಪ ರಾಜ್ಯವಿತ್ತೊಡೆ ಒಲ್ಲೆ-ಅಂದು. ತೀರ್ಥಾಟನೆ ಓಗಿರ್ತಾರೆ. ಕೈಲಾಸಬೆಟ್ಟಕ್ಕೆ ಓಗಿ ಮೂಗುಹಿಡಿದು ತಪಸ್ಸಿಗೆ ಕೂತರೂ ಕೂತರೇ.”
 ಮುಂದಿನ ಎರಡು ಸಾರೆ ಆ ಬಂಧುಗಳು ಸಂಧಿಸಿದಾಗ ನಡೆದುದು ಮೇಲಿನ ಮಾತಿನ ಪುನರುಚ್ಚಾರವೇ.
 ಈಗ ಶಂಕರಪ್ಪ, "ಆದದ್ದಾಗತದೆ. ಮಹಾದೇವನ ಮನಸ್ಸಿನಲ್ಲಿ ಏನೈತೋ ಯಾರು ಬಲ್ಲ?” ಎಂದುಕೊಂಡು, ತನ್ನ ಕಳವಳವನ್ನು ಆಂತರ್ಯದ ಪೆಟಾರಿಯಲ್ಲಿಟ್ಟ ಭದ್ರ ಪಡಿಸಿದ...
 ...ಅವರ್ತಿಯನ್ನು ತಲಪಿದ ಕುದುರೆ ಸವಾರರಿಗೆ ಸ್ವಾಮಿಯ ದರ್ಶನ ಲಭಿಸುವುದು ಕಷ್ಟವಾಗಲಿಲ್ಲ. ಬಂದವರ ಹಿರಿಮೆಯನ್ನು ಕುದುರೆಗಳೇ ಸಾರಿದುವು. ಶಿಷ್ಯಗಣ ಸುದ್ದಿ ಮುಟ್ಟಿಸಿತು.
 ಅಪರಂಪಾರನೆಂದ:
 “ಮುಂದೆ ಬರಲಿ.”
ತೆರೆದ ಕಣ್ಣನ್ನು ಮುಚ್ಚಲಾರದೆ ಸ್ವಾಮಿಯೆಡೆಗೆ ಸಾಗಿದ ಶಂಕರಪ್ಪನಿಗೆ, ತಾನೊಬ್ಬ ಅಸಾಮಾನ್ಯ ವ್ಯಕ್ತಿಯ ಎದುರಿಗಿರುವೆನೆಂದು ಭಾಸವಾಯಿತು. ಆತ ಇತರ ದೂತರೊಡನೆ ಪ್ರಣಾಮ ಸಲ್ಲಿಸಿದ. ಅರಸನ ಓಲೆಯನ್ನು ಸ್ವಾಮಿಯ ಮುಂದಿರಿಸಿ ಕೈಜೋಡಿಸಿ ನಿಂತ.
 ತನ್ನೊಳಗಿನ ಪ್ರಶ್ನೆಗಳಿಗೆ ಉತ್ತರ ಪಡೆಯಲು ಅವನ ಬುದ್ಧಿಶಕ್ತಿ ಯತ್ನಿಸಿತು.      ಈತನೇ ಏನು ತಾನು ಅತ್ತಿತ್ತ ಸಾಗಿಸಿದ್ದ ಜೀವಚ್ಛವ? ಈ ಪ್ರಭಾವಶಾಲೀ ವ್ಯಕ್ತಿ ಯೆಲ್ಲಿ? ಆ ಎಳೆಯ ಜರ್ಜರಿತ ದೇಹವೆಲ್ಲಿ? ಗಡ್ಡಮಿಾಸೆಗಳೇನೋ ಮುಖದ ಬಾಹ್ಯ ರೇಖೆಗಳನ್ನು ಮರೆಮಾಡಿವೆ. ಇನ್ನು ಧ್ವನಿ?
  "ಕೊಡಗಿನ ದೊರೆಯಿಂದ ನಮಗೆ ಆಮಂತ್ರಣ ಬಂದದೆ.” 
 –ಗಂಭೀರವಾಣಿಯಲ್ಲಿ ತನ್ನ ಶಿಷ್ಯವೃಂದವನ್ನು ಉದ್ದೇಶಿಸಿ ಅಪರಂಪಾರ ಆಡಿದ ಮಾತು. ಮುಂದುವರಿದು ಆತ ಅ೦ದುದು :
 "ಸರ್ವಸಂಗವ ತ್ಯಜಿಸಿದ ಶರಣನ ಕಾಣುವ ಆಸೆಯೇಕೋ ಅರಸಂಗೆ?"   ಅಪರಿಚಿತ ಗಂಟಲು. ಹಾಗೆ ನೋಡಿದರೆ, ವೀರಪಾಜಿಯ ಧ್ವನಿಯನ್ನು ತಾನು ಕೇಳಿಯೇ ಇಲ್ಲ...
  ಶಂಕರಪ್ಪನಿಗನಿಸಿತು: 
 ತನ್ನದೊಂದು ಭ್ರಮೆ. ಈತ ಮಹಾಮಹಿಮನಾದ ಯಾವನೋ ಜಂಗಮನೇ ಇರಬೇಕು.
 ಅವನ ಭಕ್ತಿಭಾವದಿಂದ, ತನ್ನೊಳಗಿನ ಆತಂಕವೊಂದು ದೂರಗೊಂಡ ಸಮಾಧಾನದಿಂದ ತುಸು ಕಂಪಿಸಿದ ಸ್ವರದಲ್ಲಿ, ಅರಿಕೆಮಾಡಿಕೊಂಡ :
  "ಮಡಕೇರಿಯಾಗೆ ಸ್ವಾಮಿಯೋರ ಪ್ರಸಿದ್ಧಿ ಬಾಳ." 
  ಅಪರಂಪಾರ ಹಿತವಾಗಿ ನಕ್ಕ. ಶಿಷ್ಯಗಣ ಆ ನಗೆಗೆ ಸೈ ಸೈ ಎಂದು ತಲೆದೂಗಿತು. ಅಪರಂಪಾರನಿಗೋ ವಿಚಾರಗಳ ತಾಕಲಾಟವನ್ನು ಮರೆಮಾಚುವ ತೆರೆಯಾಗಿತ್ತು ನಗೆ. ಆಗ೦ತುಕರು ಮಡಕೇರಿಯ ದೂತರು ಎಂದು ಅರಿತಾಗ, ಅಪರಂಪಾರನ ಎದೆ ಬಡಿತ