ಈ ಪುಟವನ್ನು ಪರಿಶೀಲಿಸಲಾಗಿದೆ
ಸ್ವಾಮಿ ಅಪರಂಪಾರ ೮೧
[ತನ್ನ ತಾಯಿಯನ್ನು ಕಾಣುತ್ತಿರುವ ಭ್ರಮೆ ವೀರಪ್ಪನಿಗೆ.'ಅಮ್ಮಾ! ಅಮ್ಮಾ'ಎಂದು ಕೂಗುತ್ತ ಆಕೆಯ ಬಳಿಗೆ ಓಡುವ ಆಸೆ. ಆದರೆ ಅವಳೀಗ ಈ ಲೋಕದಲ್ಲಿ ಇಲ್ಲವಲ್ಲ?
ಈಕೆ ಯಾರು ಹಾಗಾದರೆ? ಎಲ್ಲೋ ನೋಡಿರುವೆನಲ್ಲ?]
'ಮಹಾದೇವ ಮಹಾದೇವ' ಎಂದು ಅಪರಂಪಾರ ಉಚ್ಚರಿಸಬೇಕು ಎನ್ನುವಷ್ಟರಲ್ಲೆ ಆಕೆ ಎಂದಳು:
"ಶರಣು-ಶರಣು...ದಯಮಾಡಿಸಬೇಕು."
ಅರಮನೆಯನ್ನು ಬಳಸಿಕೊಂಡು ಆಕೆ ದಕ್ಷಿಣ ದಿಕ್ಕಿಗೆ ನಡೆದಳು. ಅಪರಂಪಾರ ಅವಳನ್ನು ಹಿಂಬಾಲಿಸಿದ. ಅರಮನೆಯ ದಕ್ಷಿಣ ಮೂಲೆಯನ್ನು ತಲಪುತ್ತಲೆ ಅವನಿಗೆ ಬವಳಿ ಬಂದಂತಾಯಿತು. ಹೊರಜಗಲಿಯ ಮೇಲೆ ಆತ ಕುಳಿತುಬಿಟ್ಟ.
ಹೊಸ್ತಿಲ ಬಳಿ ನಿಂತು ಗಂಗಮ್ಮನೆಂದಳು:
"ಇವತ್ತು ಇಲ್ಲೆ ದಾಸೋಹಕ್ಕೆ ನಿಲ್ಲಬೇಕು."
ಕರ್ಕಶ ಧ್ವನಿಯಲ್ಲಿ ಅಪರಂಪಾರ ನುಡಿದ:
"ಇಲ್ಲ. ನಾವು ದಾರಿತಪ್ಪಿ ಬಂದೆವು, ಈಗಲೇ ಹೋಗಬೇಕು.”
"ಹಣ್ಣುಹಂಪಲಾದರೂ ತಗೊಳ್ಳುವಿರಂತೆ."
"ಏನೂ ಬೇಡ."
[ವೀರಪ್ಪ ಮನದೊಳಗೆ ಗೊಣಗಿದ: ಒಳ್ಳೆ ಫಜೀತಿಯಾಯಿತಲ್ಲ? ನಮ್ಮ ಮನೆ ಯೊಳಗೆ ಬಂದು ಹೊಕ್ಕಿರೋ ಈಕೆ ಯಾರು? ನಾನು ಹೊರಗಿನವನು, ತಾನೇ ಮನೆ ಯೊಡತಿ ಅನ್ನುವ ಹಾಗೆ ಮಾತಾಡುತ್ತಿದ್ದಾಳಲ್ಲಾ?]
ಅಪರಂಪಾರನ ಒಳದನಿ ಚೀರಿತು:
"ಬೆದಕದಿರು, ಬೆದಕಿದರೆ ಹುರುಳಿಲ್ಲ...ಎನ್ನ ಚಿತ್ರವು ಅತ್ತಿಯ ಹಣ್ಣು ನೋಡಯ್ಯ ವಿಚಾರಿಸಿದರೆ ಏನೂ ಹುರುಳಿಲ್ಲವಯ್ಯ..."
ಕಣ್ಣಲ್ಲಿ ಕಂಬನಿ ತುಂಬಿ ಗಂಗಮ್ಮನೆಂದಳು :
"ನಮಗೆ ಭಾಗ್ಯವಿಲ್ಲ."
[ವೀರಪ್ಪ : ಅರಮನೆಯೊಳಗಿದೀರಿ. ಭಾಗ್ಯ ಇಲ್ಲ-ಅನ್ನತೀರಿ. ಆಹಾ!]
"ಭಾಗ್ಯ ಅನ್ನೋ ಮಾತೆಲ್ಲ ಮಾಯೆಯ ಮಹಿಮೆ ತಾಯಿಾ."
"ನಾವು ಇಲ್ಲಿಯವರಲ್ಲ. ಮಲೆತಿರಿಕೆಬೆಟ್ಟದ..."
[ವೀರಪ್ಪನ ಮೆದುಳಲ್ಲಿ ಗುಡುಗಿನ ಸದ್ದಾಯಿತು...ಮಲೆತಿರಿಕೆಬೆಟ್ಟ? ಮಲೆತಿರಿಕೆ-? ಏನು ಹೇಳುತ್ತಿದಾಳೆ ಆಕೆ?]
“ಏನಂದೆ ತಾಯೀ ?"
"ನನ್ನ ಮಗಳನ್ನು ಈ ಮನೆಗೆ ತಂದರು.ಅವಳ ಕೈ ನೋಡಿ ಒಂದು ಮಾತು ತಾವು ಹೇಳಿದರಾಗುತಿತ್ತು."
“ಮಗಳು ?”
"ಹಾ...ಇಲ್ಲಿ ಬಾ ಶಾಂತವ್ವ...ಏ ಶಾಂತೂ..ರಾಜಮ್ಮಾಜೀ !...”
[ವೀರಪ್ಪ : ಶಾಂತವ್ವ ? ರಾಜಮ್ಮಾಜಿ ? ಅಯ್ಯೋ! ಇದೇನು? ನಾನಿಲ್ಲಿಂದ ಓಡಬೇಕು, ಓಡಬೇಕು !]
6