ಪುಟ:ಸ್ವಾಮಿ ಅಪರಂಪಾರ.pdf/೮೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿದೆ


೮೨ ಸ್ವಾಮಿ ಅಪರ೦ಪಾರ

 ಅಪರಂಪಾರ ಏಳಲೆತ್ನಿಸುತ್ತಿದ್ದಂತೆ ಒಳಗಿನಿಂದ ಧ್ವನಿ ಹತ್ತಿರಕ್ಕೆ ಬಂತು : 
 "ಬಂದೆ ಅಮ್ಮಾ.." 
 ತಾಯಿಯ ಮಗ್ಗುಲಲ್ಲಿ ನಿಂತವಳನ್ನು ಅಪರಂಪಾರ ನೋಡಿದ. ಆ ಜವ್ವನೆಯ   ಮುಗ್ಧ ರೂಪರಾಶಿ ಅವನ ಕಣ್ಣಗಳನ್ನು ಕುಕ್ಕಿತು.

[ವೀರಪ್ಪ: ಏನು ಮಾಡತಾ ಇದೀರಿ ನನ್ನ ? ಏನು ಮಾಡತಾ ಇದೀರಿ? ಆ ಎಂಟು ವರ್ಷದ ಹುಡುಗಿ...]

 ಅಪರಂಪಾರ ಕೇಳಿದ : 
 “ನನ್ನಿಂದೇನಾಗಬೇಕು, ತಾಯಿಾ ?"               
 ಗಂಗಮ್ಮ ಅಂದಳು:          
 “ನಮ್ಮ ಅಳಿಯಂದಿರು–ಅಪ್ಪಾಜಿ ಅರಸರ ಹಿರಿಮಗ__ಸತ್ರರು ಅನ್ನುತಾರೆ, ಬದುಕಿ ದ್ವಾರೆ ಅನ್ನುತಾರೆ. ಹಸ್ತಸಾಮುದ್ರಿಕದಿಂದ ಗತ್ತಾಗತದೆ ಅಲ್ಲವಾ? ರಾಜಮ್ಮಾಜಿ, ಕೂತುಕೋ, ಸೋಮಿಯವರಿಗೆ ಅಂಗೈ ತೋರಿಸು."
 ರಾಜಮ್ಮಾಜಿ ಹಿಂದೆಗೆದಂತೆ ಕಂಡಿತು. ಆದರೂ ಗುರುತ್ವಾಕರ್ಷಣೆಗೊಳಗಾದವಳಂತೆ ಹೊಸ್ತಿಲ ಮೇಲೆ ಆಕೆ ಕುಳಿತು, ಎರಡೂ ಅಂಗೈಗಳನ್ನು ಮುಂದಕ್ಕೆ ಚಾಚಿದಳು.
 [ವೀರಪ್ಪ : ನಾ ಇನ್ನು ತಡೆಯಲಾರೆ. ಒಮ್ಮೆ ಮುಟ್ಟಿದ ಕೈಯನ್ನ ಮುಟ್ಟತೀನಿ! ನಾನು ಅಳಬೇಕು, ಅಳಬೇಕು !]
 "ಹೇಳಿ ಸೋಮಿಯೋರೆ" ಎಂದಳು ಗಂಗಮ್ಮ.       
 ಶಾಂತಧ್ವನಿಯಲ್ಲಿ, ಕೈಗಳನ್ನು ಮುಟ್ಟದೆ, ದೃಷ್ಟಿಯನ್ನಷ್ಟೆ ಅತ್ತ ಹೊರಳಿಸಿ ಅಪರಂಪಾರನೆ೦ದ : 
 "ನಿನ್ನ ಈ ಮಗಳಿಗೆ ಮುತ್ತೈದೆ ಸಾವು ಲಭಿಸತದೆ, ತಾಯಿಾ."      
 ಆ ಧ್ವನಿಯ ಮಾಧುರ್ಯಕ್ಕೆ ರಾಜಮ್ಮಾಜಿ ಮನಸೋತಳು. ಅವಳ ಕಂಕುಳು ಬೆವರಿತು.
 ಅಪರಂಪಾರನ ಮಾತಿನಿಂದ ಹರ್ಷಿತಳಾದ ಗಂಗಮ್ಮ ಪುನಃ ಪುನಃ ಕೇಳಿದಳು : 
 "ಹೌದಾ ಸೋಮಿಯೋರೆ ?"                
 ಆ ಆನಂದೋದ್ವೇಗದಲ್ಲಾ. ನಿಕ್ಷೇಪ ದೊರೆಯುವ ಸಂಗತಿ ಖಚಿತವಾಗಲೆಂದು ಅವಳೆಂದಳು :
 “ನನ್ನ ಮಗಳಿಗೆ ಸಂತಾನಪ್ರಾಪ್ತಿಯಾಗತಾದಾ ಅಷ್ಟು ಹೇಳಿ, ಸೋಮಿಯೋರೆ." 
 "ಮಹಾದೇವ ! ಮಹಾದೇವ !"               
 ಗಂಗಮ್ಮ ನೋಡುತ್ತಲಿದ್ದಂತೆಯೇ ಅಪರಂಪಾರ ಎದ್ದು ಬಿಟ್ಟಿದ್ದ. ತನ್ನ ಅರಿಕೆಯನ್ನು ಪುನರುಚ್ಚರಿಸಿದಳು ಗಂಗಮ್ಮ. ಉತ್ತರಿಸಲು ಆಪರಂಪಾರ ಅಲ್ಲಿರಲಿಲ್ಲ.
 ರಾಜಮ್ಮಾಜಿ ಕುಳಿತಲ್ಲೇ ಇದ್ದಳು. ಗಂಗಮ್ಮ "ಸೋಮಿಯೋರೆ, ಸೋಮಿಯೋರೆ" ಎಂದು ಕರೆಯುತ್ತ ಹೆಬ್ಬಾಗಿಲಿಗೆ ಧಾವಿಸಿದಳು. ಕಾವಿಯುಡುಗೆಯ ವ್ಯಕ್ತಿ ದೂರದಲ್ಲಿ ವೇಗವಾಗಿ ಕಣ್ಮರೆಯಾಗುತ್ತಿದ್ದುದು ಕಾಣಿಸುತ್ತಿತು.

ಗಂಗಮ್ಮನ ಗಂಟಲು ಕೇಳಿ, ಚನ್ನಬಸಪ್ಪ ಗವಾಕ್ಷಿಯಿಂದ ತಲೆ ಹೊರಗೆ ಹಾಕಿ, "ಯಾರದು? ಅದೇನು ಗಲಾಟೆ ? " ಎಂದು ಗದರಿದ.