ಪುಟ:ಸ್ವಾಮಿ ಅಪರಂಪಾರ.pdf/೮೫

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿದೆ


 ಸಾಮಿ ಅಪರಂಪಾರ ೮೩

 ...ಅಪ್ಪಂಗಳಕ್ಕೆ ಬಿರುಗಾಳಿಯಂತೆ  ಬಂದು  ಬಿರುಗಾಳಿಯಂತೆ ಹೊರಟುಬಿಟ್ಟ         ಅಪರಂಪಾರ, ಕವಿಯುತ್ತಿದ್ದ ಕತ್ತಲೆಯನ್ನೂ ಲೆಕ್ಕಿಸದೆ ಮಡಕೇರಿಯ ಕಡೆಗೆ ನಡೆಯುತ್ತ,     ತನ್ನಷ್ಟಕ್ಕೆ ಪುನಃ ಪುನಃ ಅಂದ:
 "ಭಸ್ಮವ ಹೂಸಿ ಬತ್ತಲೆ ಇದ್ದರೇನು ಬ್ರಹ್ಮಚಾರಿಯೆ? ಅಶನವನುಂಡು ವ್ಯಸನವ ಮರೆದಡೇನು ಬ್ರಹ್ಮಚಾರಿಯೆ? ಭಾವ ಬತ್ತಲೆ ಇದ್ದು ಮನವು ಗಂಭೀರವಾದರೆ ಅದು ಸಹಜ ನಿರ್ವಾಣ ಕಾಣಾ ಗುಹೇಶ್ವರಾ...”
              ೨೬
 ಅಪರಂಪಾರ ಇರುಳಿನಲ್ಲಿ ದಾರಿ ನಡೆದು ಮಡಕೇರಿಯನ್ನು ತಲಪಿದ. ಓಂಕಾರೇಶ್ವರ ದೇವಾಲಯಕ್ಕೆ ನಡೆದ. ಮಂದಿರದ ಮುಂದಿನ ಕೊಳ ನಿಶ್ಚಲವಾಗಿತು, ಅಪರಂಪಾರ ಆ ಶೀತಲ ಜಲದಲ್ಲಿ ಮೈತೊಳೆದ, ಹೊಲೆ ತುಂಬಿದ್ದ ಮನವನ್ನೂ ತೊಳೆದ. ಮೇಲಕ್ಕೆದ್ದು ಬಂದಾಗ, ಮನಸ್ಸಿಗೆ ನೆಮ್ಮದಿ ಮರಳಿತು. ಗರ್ಭಗುಡಿಯ ಬಾಗಿಲನ್ನು ಮುಚ್ಚಿದ್ದರು. ಅದರ ಮುಂದೆ ಪದ್ಮಾಸನ ಹಾಕಿ ಕುಳಿತು, ಕೈಯಲ್ಲಿ ರುದ್ರಾಕ್ಷಿ ಸರವನ್ನು ಹಿಡಿದು, ಅಪರಂಪಾರ ಶಿವಧ್ಯಾನ ಮಾಡಿದ. ಅದೆಷ್ಟು ಹೊತ್ತು ಹಾಗೆ ಕುಳಿತಿದ್ದನೋ, ಭಾವ ಸಮಾಧಿಯಿಂದ ಎಚ್ಚೆತ್ತಾಗ ಅಪೂರ್ವ ಮನಶ್ಶಾಂತಿ ಅವನಿಗೆ ಲಭಿಸಿತ್ತು.ಬೆಳ್ಳಿ ಮೂಡಿತ್ತು ಆಗಲೇ. ದೀರ್ಘ ನಿದ್ದೆಯಿಂದ ಎದ್ದವನಂತೆ ಅವನು ಉಲ್ಲಸಿತನಾಗಿದ್ದ. ಕೊಳದ ದಂಡೆ ಯುದ್ದಕ್ಕೂ ಆತ ಶತಪಥ ತುಳಿದ. ನೇಸರು ಮೂಡುವ ವೇಳೆಗೆ ದೇವಾಲಯದ ಮುಖ ಮಂಟಪದಲ್ಲಿ ಗೋಡೆಗೊರಗಿ ಕುಳಿತು, ಸ್ವಲ್ಪ ಕಾಲ ವಿರಮಿಸಿದ.
 ರಾಜಧಾನಿ ಎಚ್ಚತ್ತು ನಿತ್ಯಕರ್ಮಗಳಲ್ಲಿ ನಿರತವಾಯಿತು. ದೇವಾಲಯದ ಮುಖ ಮಂಟಪದಲ್ಲಿ ಪಾರಿವಾಳಗಳ ಕುಟುರ್ ಕುಟುರ್ ಧ್ವನಿಯಿಂದ ವಾತಾವರಣ ತುಂಬಿತು. ಅರ್ಚಕ ಬಂದು ಸಾನಕ್ಕೆಂದು ಪುಷ್ಕರಿಣಿಗೆ ಇಳಿದ, ಮಿಂದು ಓಂಕಾರೇಶ್ವರನಿಗೆ ನಮಿಸಿ ಹೋಗಲು ಭಕಾದಿಗಳು ಬಂದರು. 
 ಅದು, ಲಿಂಗರಾಜ ಒಡೆಯ ಕಟ್ಟಿಸಿ ಪೂರ್ತಿಗೊಳಿಸಿದ್ದ ದೇಗುಲ, ಅರಮನೆ ಪ್ರಜೆಗಳ ಅಭಿಮಾನದ ಕೇಂದ್ರವಾಗಿದ್ದಂತೆ, ಈ ದೇವಾಲಯ ಅವರ ಧರ್ಮನಿಷ್ಟೆಯ ಕುರುಹಾ ಗಿತ್ತು.
 ಗರ್ಭಗುಡಿಯ ಬಾಗಿಲನ್ನು ತೆರೆದಿದ್ದರು. ಅಪರಂಪಾರ ದೇವಾಲಯಕ್ಕೆ ಪ್ರದಕ್ಷಿಣೆ ಬಂದು ಓಂಕಾರೇಶ್ವರನಿಗೆ ನಮಿಸಿದ.
 ಹೊರಬಿದ್ದು ಅರಮನೆಯ ದಾರಿಹಿಡಿದ. 
 ಹಾವುಗೆಗಳ ಸದ್ದು , ರಭಸದ ನಡಿಗೆ. ಹಾರಾಡುತ್ತಿದ್ದ ನಿಲುವಂಗಿ. ಯಾವ ಬೀದಿಗೇ ಆತ ತಿರುಗಲಿ, ಇಕ್ಕೆಲಗಳಲ್ಲಾ ಜನ ನಿಂತು ಅವನನ್ನು ನೋಡಿದರು. ಅವರಲ್ಲಿ ಹಲವರು ಕೈ ಜೋಡಿಸಿ ನಮಸ್ಕರಿಸಿದರು. ಮತ್ತೆ ಹಲವರು ನಡುಬಾಗಿಸಿ ವಂದಿಸಿದರು,

ಅರಮನೆಯ ಕಡೆಗೆ ಆತ ಹೊರಟುದನ್ನು ಕಂಡು ಅನೇಕರು ಅವನನ್ನು ಹಿಂಬಾಲಿ ಸಿದರು.

 ಮಹಾದ್ವಾರದ ಬಳಿ ಪ್ರತಿಹಾರರನ್ನು ಕುರಿತು ಅಪರಂಪಾರನೆಂದ:
 “ನಾವು ಬಂದಿದೇವೆ ಅಂತ ಅರಸನಿಗೆ ತಿಳಿಸಿರಿ.”