ಪುಟ:ಹಳ್ಳಿಯ ಚಿತ್ರಗಳು.djvu/೪೫

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪ್ರಕಟಿಸಲಾಗಿದೆ
೩೧
ನಾವು ಮಾಡಿದ ಒಂದು ಯಾತ್ರೆ

ಯಾವ ಸಾಮಾನನ್ನೂ ತೆಗೆದುಕೊಂಡು ಹೋಗುವವರಾಗಿರಲಿಲ್ಲ. ಆದರೆ ರಾತ್ರಿ ಮಲಗುವುದಕ್ಕೆ ಮಾತ್ರ ಒಂದು ಕಂಬಳಿ ಬೇಕಾಗಿದ್ದಿತು. ನನ್ನ ಹತ್ತಿರ ಒಂದು ಕರಿಯ ಕಂಬಳಿ ಇದೆ. ಅದು ನನ್ನೊಂದಿಗೆ ಮದರಾಸು, ಬೊಂಬಾಯಿ, ಅಹಮದಾಬಾದ್, ಬೆಳಗಾಂ ಮುಂತಾದ ಕಡೆಗಳನ್ನೆಲ್ಲಾ ತಿರುಗಿದೆ. ಗುಂಡನು ಅದಕ್ಕೆ ರೊಮಾಂಟಿಕ್ ಕಂಬಳಿ ಎಂದು ಹೆಸರಿಟ್ಟಿದ್ದಾನೆ. ನಾನು ಎಲ್ಲಿ ಪ್ರಯಾಣ ಹೊರಟರೂ ಕಂಬಳಿಯು ಹೊರಕ್ಕೆ ಬಂದೇ ಬರುತ್ತದೆ. ಅದರಲ್ಲೂ ಈಗ ಮಳೆಗಾಲ ಕೇಳಬೇಕೆ? ಕಂಬಳಿಯನ್ನು ತೆಗೆದು ಮಡಿಸಿ ಇಟ್ಟಿ. ನನ್ನ ಹೆಂಡತಿಯು “ಕಂಬಳಿಯನ್ನು ಯಾಕೆ ಮಡಿಸುತ್ತಿದ್ದೀರಿ?” ಎಂದಳು. ನಾನು ಅಪರಾಧಿಯಂತೆ "ಏನೋ ಮಡಿಸಿದೆ" ಎಂದೆ. ಹೆಂಗಸರಿಗೆ ಬುದ್ದಿ ಏನು ಚುರುಕೋ ದೇವರೇ ಬಲ್ಲ. ಆ ಪುಣ್ಯಾತಿ ಆ ಸ್ಥಳ ಬಿಟ್ಟು ಏಳಲೇ ಇಲ್ಲ. ಹೂವು ಕಟ್ಟುವುದು ಮುಗಿಯಲೇ ಇಲ್ಲ. ಗುಂಡ ೨-೩ ಸಲ ಒಳಕ್ಕೆ ಬಂದು ನೋಡಿ ಹೋದ. ಬಸ್ಸಿಗೆ ಹೊತ್ತಾಗುತ್ತಾ ಬಂತು. ನಾನು ಅಶಾಂತಿಯಿಂದ ಆ ಕಡೆ ಈ ಕಡೆ ಹೊರಳಾಡಿದೆ. ನನ್ನ ಹೆಂಡತಿಯು ನನ್ನನ್ನು ನೋಡಿ ೨-೩ ಸಲ ನಕ್ಕಳು. ಇನ್ನು ಶರಣಾಗತನಾಗುವುದರ ಹೊರತು ಬೇರೆ ಉಪಾಯ ತೋರಲಿಲ್ಲ. ಹೆಂಡತಿಯನ್ನು ಒಳಕ್ಕೆ ಕರೆದೆ. ಹೊರಟಿರುವ ವಿಷಯವನ್ನು ಒಪ್ಪಿಕೊಂಡೆ. ಬಸ್ಸಿಗೆ ಹೊತ್ತಾಗುತ್ತಿರುವುದನ್ನು ನೋಡಿ ಅವಳು ಅಡ್ಡ ಬರಲಿಲ್ಲ. ಒಳಗೆ ಹೋಗಿ ಮದುವೆಯ ತಿಂಡಿಯನ್ನೂ ಸ್ವಲ್ಪ ಹುಳಿಯನ್ನವನ್ನೂ ಕೇಳಿ ತಂದಳು. ಸರಿ ಅಪರಾಧಿಗೆ ಒಳ್ಳೆಯ ಶಿಕ್ಷೆಯನ್ನೇ ವಿಧಿಸಿದಂತಾಯಿತೆಂದುಕೊಂಡೆ. ಹೊರಡುವಾಗ “ಈಗ ಹೋಗಿ ಬನ್ನಿ. ಬಂದ ಮೇಲೆ ಇದೆ ನಿಮಗೆ ಹುಟ್ಟಿದ ದಿವಸ” ಎಂದಳು. ಅವಳ ಕೈಲಿ, ಹುಟ್ಟಿದ ದಿವಸ"ವನ್ನು ನಾನು ಅನೇಕ ಸಾರಿ ಕಂಡಿದ್ದುದರಿಂದ ನನಗೆ ಗಾಬರಿಯಾಗಲಿಲ್ಲ.

ನಾವು ಹಾಸನದಲ್ಲಿ ಬಸ್ಸಿನಲ್ಲಿ ಕುಳಿತು ಬೇಲೂರಿಗೆ ಹೊರಟೆವು. ಕುಳಿರ್ಗಾಳಿಯು ಬೀಸುತ್ತಿದ್ದುದರಿಂದ ಇಬ್ಬರಿಗೂ ಸೇರಿ ಒಂದೇ ಕಂಬಳಿ ಯನ್ನು ಸುತ್ತಿಕೊಂಡೆವು. ನಾವು ದಾರಿಯಲ್ಲಿ ಕಂಡ ದೃಶ್ಯಗಳ ಸೊಬಗನ್ನು ನನ್ನ ಈ ಬಡ ಲೇಖನಿಯು ವರ್ಣಿಸಬಲ್ಲದೆ? ಮಲನಾಡೆಂಬ ಒಂದೇ