ಒಳಗೆ ಕುಳಿತರೆ ನಾನ್ಯಾಕೆ ಹುಚ್ಚನಂತೆ ಹಾರಿಬಿದ್ದೆ? ನನ್ನ ವಿವೇಕವೆಲ್ಲ ಎಲ್ಲಿಹೋಯಿತು? ನನಗೆ ವಯಸ್ಸಾದು ನಾಯಿಗೆ ಆದಂತೆ, ಎಂದು ಅವರು ಪಶ್ಚಾತ್ತಾಪಪಟ್ಟರು. ಹೊರಗಡೆಯ ತೋರಿಕೆಗೆ ಅವರೇ ಜಯಶಾಲಿಗಳಾಗಿದ್ದರೂ, ದುಃಖದಿಂದ ಅವರ ಹೃದಯವು ವಿದೀರ್ಣವಾಗಿತ್ತು. ಸಾವಿರಾರು ಜನರು ತಮ್ಮಿಂದ ಸಹಾಯವನ್ನು ಹೊಂದಿ, ನಿತ್ಯವೂ ತಮ್ಮನ್ನು ದಾತಾರರೆಂದು ಹೊಗಳುತ್ತಿರುವಾಗ, ಸ್ವಾಭಿಮಾನವೆಂಬ ಒಣ ಹೆಮ್ಮೆಗೆ ತುತ್ತಾಗಿ, ಆ ಒಬ್ಬ ಬಡ ಪ್ರಾಣಿಯನ್ನು ಒಂದು ರೂಪಾಯಿನ ನೆಪದಿಂದ ನೋಯಿಸಿದುದಕ್ಕಾಗಿ, ಅವರಿಗೆ ಬಹಳ ಸಂಕಟವಾಗಿ ತಮ್ಮನ್ನು ತಾವೇ ಹಳಿದುಕೊಂಡರು. ಗಾಡಿಯವನಂತೂ, ಪಾಪ, ಗಟ್ಟಿಯಾಗಿ ಉಸಿರು ಕೂಡ ಬಿಡದೆ, ಗಾಡಿಯನ್ನು ಹೊಡೆದುಕೊಂಡು ಹೋಗುತ್ತಿದ್ದನು. ಜೋಡಿದಾರರೊಂದಿಗೆ ತಾನು ಒಂದು ರೂಪಾಯಿಗೆ ಮಾಡಿದ ಚೌಕಶಿಯಿಂದ ಅವನಿಗೂ ಪಶ್ಚಾತ್ತಾಪವಾಗಿತ್ತು. ಜೋಡಿದಾರರನ್ನು ತಿರುಗಿ ನೋಡುವುದಕ್ಕೆ ಕೂಡ ಅವನಿಗೆ ಧೈರ್‍ಯವಿರಲಿಲ್ಲ. ಒಮ್ಮಿಂದೊಮ್ಮೆ ಮಳೆಯು ಮತ್ತೆ ಜೋರಾಗಿ ಬರಲು ಪ್ರಾರಂಭವಾಯಿತು. ಗಾಡಿಯವನ ಕಂಬಳಿ, ದಟ್ಟಿ ಎಲ್ಲಾ ತೊಯ್ದು ಹೋಗಿ ಅವನ ಮೈಯಿಂದ ನೀರು ಕೆಳಕ್ಕೆ ಸುರಿಯುತ್ತಿದ್ದಿತು. ಅವನು ಚಳಿಯಿಂದ ಗಡಗಡ ನಡುಗುತ್ತಿದ್ದನು. ಅವನನ್ನು ಕಂಡು ಜೋಡಿದಾರರಿಗೆ ಬಹಳ ಕನಿಕರವುಂಟಾಯಿತು. ಅವರು ಮೃದುವಾದ ಧ್ವನಿಯಿಂದ “ಚೆನ್ನ ಗಾಡಿಯಲ್ಲಿ ಕುಳಿತುಕೊ, ಇದುವರೆಗೆ ನೆನೆದುದೇ ಸಾಕು” ಎಂದರು. ಚೆನ್ನನು ತನ್ನ ಕಿವಿಯನ್ನೇ ತಾನು ನಂಬಲಿಲ್ಲ. ತಾನು ಹಿಂದೆ ಮಾಡಿದ ತಪ್ಪಿಗಾಗಿ ಜೋಡಿದಾರರು ತನ್ನನ್ನು ಹಾಸ್ಯ ಮಾಡುತ್ತಿರುವರೆಂದು ಅವನು ತಿಳಿದನು. ಅವನು ದೈನ್ಯದಿಂದ “ಬುದ್ದಿ, ಏನೋ ತಿಳೀಲಿಲ್ಲ. ನನ್ನ ಹಾಸ್ಯ ಮಾಡ್ಬೇಡಿ, ನಾವು ಬಡವು, ನೀವು ಕಾಪಾಡ್ದ್ರೆ ಉಂಟು. ಇಲ್ದಿದ್ರೆ ಸಾಯ್ತೇವೆ. ನನ್ನ ತಪ್ಪ ಮಾಫ್ ಮಾಡ್ಬಿಡಿ. ಮುಂದೆ ಹಾಂಗೆಂದ್ರೂ ಮಾಡೋದಿಲ್ಲ" ಎಂದನು. ಜೋಡಿದಾರರು ವಿಶ್ವಾಸದಿಂದ “ಚೆನ್ನ ಹೀಗೆಲ್ಲಾ ಮಾತ್ನಾಡ್ಬೇಡ. ಭಗವಂತನ್ಮುಂದೆ ನಾವೆಷ್ಟರವರು. ನಾನು ನಿನ್ನನ್ನು ಸಂರಕ್ಷಿಸೋಕೆ ನನಗಿರೋ ಅಂಥಾ ಅಧಿಕಾರವೇನು? ಏನೋ ನನ್ಗೂ ಸಿಟ್ಬಂತು; ನಿನ್ಗೂ