ಸಾದೇವನಿಗೆ ಆಗ ಇಪ್ಪತ್ತು ವರುಷಗಳಾಗಿರಬೇಕು. ಹತ್ತು ವರುಷಗಳ ಹಿಂದೆ, ದ್ಯಾಂವಕನ ಹತ್ತಿ ಹೊಂದಿದ ಆಪ್ತೇಷ್ಟರು ತಮ್ಮ ತಮ್ಮಲ್ಲಿ ಮಕ್ಕಳ-ತಮ್ಮಂದಿರ ಏಳು ಮದುವೆಗಳನ್ನು ಹೂಡಿದರಂತೆ. ಒಂದೇ ಹಂದರದಲ್ಲಿ ಒಂದೇ ದಿವಸ, ಒಂದೇ ಮುಹೂರ್ತಕ್ಕೆ ಏಳು ಮದುವೆಗಳಾಗಬಾರದೆಂದು, ನಮ್ಮ ದ್ಯಾಂವಕ್ಕನೂ ತನ್ನ ಮಗ ಸಾದೇವನ ಮದುವೆಯನ್ನೂ ತನ್ನ ತಮ್ಮನ ಮಗಳಾದ ಮೂರು ವರುಷದ ನೀಲಿಯೊಡನೆ ಹೂಡಿ, ಎಂಟನೆಯ ಮದುವೆಯಿಂದ ಹಂದರವನ್ನು ಸರಿಪಡಿಸಿ, ನಾಲ್ಕು ಜನರ ಕಡೆಯಿಂದ ಹೌದೆನಿಸಿಕೊಂಡು ಬಿಟ್ಟಳಂತೆ ! ಈಗವಳ ಸೊಸೆ ಎಷ್ಟೆಂದರೂ ಚಿಕ್ಕವಳೇ ಇರುವಳು. ಅತ್ತೆಯ ಮನೆಗೆ ಬರುವಷ್ಟು ಇನ್ನೂ ದೊಡ್ಡವಳಾಗಿಲ್ಲ, ವರ್ಷದಲ್ಲಿ ಒಮ್ಮೆ ತಾಯಿ-ತಂದೆಗಳೊಡನೆ ಎಲ್ಲಮ್ಮನ ಜಾತ್ರೆಗೆಂದು ಬಂದಾಗ ಕೆಲದಿನ ಅತ್ತೆಯ ಮನೆಯಲ್ಲಿದ್ದು ಉಂಡು-ತಿಂದು ಮತ್ತೆ ತನ್ನೂರಿಗೆ ಹೋಗುವಳು.
ಸಾದೇವನು ಶಾಲೆಗೆ ಬಹಳ ದಿವಸ ಹೋಗಲಿಲ್ಲ. ಕನ್ನಡ ೩-೪ ಇಯತ್ತೆಯಾಗುವಷ್ಟರಲ್ಲಿ ಗರಡೀಸಾಧಕಕ್ಕೆ ಮೆಟ್ಟಿ ಶಾಲೆ ಬಿಟ್ಟನು. "ಕಾಗದ ಓದೂ ಪೂರ್ತಿ ಬಂತು ಸಾಕು, ನನ್ನ ಮಗ್ಗರ ಏನ ಕಡಿಮ್ಯಾಗೇತಿ ? ” ಎಂದು ತಾಯಿಯು ಮುಂದೆ ಕಲಿಯಲು ಆಗ್ರಹ ಮಾಡಲಿಲ್ಲ. ಸಾದೇವನೂ ಒಳ್ಳೆಯ ಗುಣವಂತ-ಚೆಲುವ, ದಿನಾಲು ನಸುಕಿನಲ್ಲಿದ್ದು ಗರಡೀಸಾಧಕ ಮಾಡುತ್ತಿದ್ದನು. ಎರಡೆರಡು ಸೇರು ನೊರೆಹಾಲು ಕುಡಿದು ಅರಗಿಸುವನು. ಗುಲಾಬಿ-ಕಿತ್ತಳೆ ಬಣ್ಣದ ಪಟಕಾ ಸುತ್ತುವನು; ಯಾವಾಗಲೂ ಬಿಳಿಯ ಅರಿವೆಗಳನ್ನೇ ಧರಿಸುವನು; ರೇಶಿಮೆ-ಅಲಪಾಕಿನ ಜಾಕೀಟುಗಳನ್ನು ತೊಡುವನು, "ನನ್ ಮಗಾ ನೋಡಿ ಬಾಯಾರ, ಹ್ಯಾಂಗ ಕಾಮಣ್ಣಾಗ್ಯಾನ!" ಎಂದು ಅಭಿಮಾನಪಟ್ಟುಕೊಳ್ಳುವ ದ್ಯಾಂವಕ್ಕನ ಮುಖದಿಂದಲೇ ಆಕೆಯ ಮಗನ ಬಣ್ಣನೆಯನ್ನು ಕೇಳಬೇಕು.