ಪುಟ:ಹೂಬಿಸಿಲು-ಶ್ಯಾಮಲಾದೇವಿ.pdf/೧೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೮೮

ಹೂಬಿಸಿಲು

ಭಾರತ ಹುಣ್ಣಿಮೆಯಿನ್ನೂ ಎಂಟು ದಿನವಿರುವಾಲೇ ತನ್ನ ತಮ್ಮನಿಗೆ ಕಾಗದ ಬರೆಯಿಸಿದಳು ದ್ಯಾಂವಕ್ಕ, ಹುಣ್ಣಿವೆಯ ಮುನ್ನಾ ದಿವಸ ಮೊದಲನೇ ಮೋಟಾರಿಗೆ ಹೊರಡುವದು ಖಂಡಿತನೆಂತಲೂ ಅಷ್ಟು ಹೊತ್ತಿಗೆ ತನ್ನ ತಮ್ಮನು, ಹೆಂಡತಿಮಗಳೊಂದಿಗೆ ಊರಿಗೆ ಬಂದಿರಬೇಕಂತಲೂ ಒತ್ತಾಯಪಡಿಸಿದ್ದಳು,

ಗುಡ್ಡದಲ್ಲಿ ಹದಿನೈದು ದಿನಗಟ್ಟಲೆ ತಾನು ಇರುವವಳೆಂದು ಹುರಕ್ಕಿಯ ಹೋಳಿಗೆ, ಅಂಬೋಡೆ, ಗಾರಿಗೆ, ಪುಠಾಣಿಯ ಉಂಡಿ, ಸುರಮಾಲಾಡು ಮೊದಲಾದವುಗಳನ್ನು ಮಾಡಿಟ್ಟುಕೊಂಡು ಸಿದ್ಧಳಾದಳು. ಪ್ರವಾಸದ ಸಾಹಿತ್ಯವನ್ನು ಸಜ್ಜುಗೊಳಿಸುವಾಗ, ದ್ಯಾಂವಕ್ಕ ಮುಖ್ಯವಾಗಿ ದೇವಿಯ ಚಾಮರ-ಕವಡಿಮಾಲೆಗಳನ್ನು ತೊಳೆದು ಕಟ್ಟಲು ಮರೆಯಲಿಲ್ಲ.

ಆಚೇನಾಳೆ ಹುಣ್ಣಿವೆಯೆಂದರೆ, ಮುನ್ನಾ ದಿನ ಸರಿರಾತ್ರಿಯಲ್ಲಿಯೇ ಎದ್ದಳು. ಮನೆಯನ್ನು ಸಾರಿಸಿ ರಂಗವಲ್ಲ-ಭಂಡಾರ. ಕುಂಕುಮಗಳಿಂದ ಸಿಂಗರಿಸಿದಳು. ತಾನೂ ಎರಕೊಂಡು, ಮಗನನ್ನೆಬ್ಬಿಸಿ ಎರೆದಳು. ಎಲ್ಲಮ್ಮನ ಗುಡ್ಡದಲ್ಲಿ ಗಲಾಟೆ ಬಹಳ, ಕಳವಾದಾವೆಂದು ಭಾರೀ ಎನ್ನಿಸಿಕೊಳ್ಳುವ ಆಭರಣಗಳನ್ನು ಒಂದು ಮಡಿಕೆಯಲ್ಲಿ ಹಾಕಿ ದೇವರ ಜಗುಲಿಯ ಮುಂದೆ ತಾಯಿ-ಮಗ ಇಬ್ಬರೂ ಕೂಡಿ ಹೂಳಿ ಭದ್ರವಾಗಿಟ್ಟರು. ಅಷ್ಟು ಹುಗಿಯಲು ತಗ್ಗು ತೆಗೆಯುವಾಗ, ಸಾದೇವನು ತನ್ನ ತಾಲೀಮು ತಪ್ಪಿತೆಂಬ ಹೆದರಿಕೆ ಹಾಕಿ, ಹುಣ್ಣಿಮೆಯ ದಿವಸ ಸಾಯಂಕಾಲವೇ ತನ್ನನ್ನು ಊರಿಗೆ ಕಳಿಸಬೇಕೆಂದು ತಾಯಿಯ ಕಡೆಯಿಂದ ಒಪ್ಪಿಗೆ ಪಡೆಯಲು ಮರೆಯಲಿಲ್ಲ. ವರ್ಷದ ಅವಧಿಯಲ್ಲಿ ಏನಿಲ್ಲೆಂದರೂ ನೂರಿನ್ನೂರು ರೂಪಾಯಿಗಳ ಬೆಳ್ಳಿಯ ಕಡಗಗಳನ್ನು ಹೊಡೆದುಕೊಂಡು ಬರುವನು ಕುಸ್ತಿಯಲ್ಲಿ, ಎಂದಮೇಲೆ ತಾಯಿ ಅವನ ಮಾತಿಗೆ ವಿರುದ್ಧವಾಗಿ ಎಂದಿಗಾದರೂ ನಡೆದುಕೊಳ್ಳುವಳೆ ?