ಯಾರೋ ಬಾಗಿಲು ತಟ್ಟಿದರು; ಎದ್ದು ಬಾಗಿಲು ತೆರೆದನು. ನಾಲ್ಕು ಜನ ಪೊಲೀಸರು ನಿಂತಿದ್ದಾರೆ; ಹುಡುಗರು ಹೆದರಿದರು. ಅಷ್ಟು ಹೊತ್ತಿನ ವರೆಗೆ ಕಟ್ಟಿದ್ದ ತಮ್ಮ ಸುಖದ ಗಾಳಿ ಗೋಪುರವು ಗಾಳಿಗೋಪುರವೆ ಆಗಿ, ಗಾಳಿಯೊಡನೆ ಹಾರಿಹೋಗಿ ಹುಡಿಗೂಡುವ ಹೊತ್ತು ಬಂದಿತಲ್ಲವೆಂದು ಗಾಸಿಯಾದರು.
ಪೋಲಿಸರು ಅವರ ಹೆಸರನ್ನು ಬರೆದುಕೊಂಡು, ಅವರಿಬ್ಬರ ಜವಾಬು ತೆಗೆದುಕೊಂಡರು. ಸಾಕಷ್ಟು ನಿಜ ಸುದ್ದಿಯು ತರುಣರಿಂದ ಅವರಿಗೆ ಸಿಕ್ಕಿತು. ಹೊಡೆತ-ಬಡಿತಗಳಿಲ್ಲದೆ ಹುಡುಗರು ಒಳ್ಳೆಯ ರೀತಿಯಿಂದ ನಿಜವಾದ ಸಂಗತಿಯನ್ನು ಮೊದಲುಕೊನೆಯಾಗಿ ಹೇಳಿದ ಬಳಿಕ, ಪೋಲಿಸರು ಸಾಮಾನಿನೊಡನೆ ಅವರನ್ನು ರೈಲು ಹತ್ತಿಸಿ. ಬೆಳಗಾಂವಿಗೆ ಅಟ್ಟಿದರು. ಅವರ ಜೊತೆಗೆ ಪೋಲಿಸರಿಬ್ಬರು ಬಂದೇ ಬಿಟ್ಟರು, ಬೆಂಗಾವಲಾಗಿ, ಮರುದಿವಸ ಬೆಳಗಾಂವಿಗೆ ರೈಲು ಬಂದೊಡನೆ ಅವರನ್ನು ಪೋಲಿಸರು ನಮೂರ ಪೊಲೀಸ್ ಸ್ಟೇಶನ್ನಿಗೆ ತಂದು ಲಾಕಪ್ಪಿನಲ್ಲಿಟ್ಟರು.
ಇಬ್ಬರ ಮುಖವೂ ಗಾಬರಿಯಿಂದ ಬಾಡಿದಂತಾಗಿತ್ತು, ತರುಣಿಯಂತೂ ಒಳ್ಳೆಯ ಗಾಬರಿಯಿಂದ, ಮುಂದೇನು ಗತಿಯೆಂಬರ್ಥದ ದೃಷ್ಟಿಯಿಂದ ತರುಣನ ಕಡೆಗೆ ನೋಡಲು, ತರುಣ ಹಿಸುಕ್ಕನೆ ನಕ್ಕು, ಕಣ್ಣು ಹುಬ್ಬು ಹಾರಿಸುತ್ತಿದ್ದನು; ಮೆಲ್ಲಗೆ ಸಿಳ್ಳು ಹಾಕಿ, “ಮಡಮ್ ಸಾಬ ಸಲಾಮ್ರಿ.” ಎನ್ನುತ್ತ ನಗುವನು. ಹುಡುಗಿಯು ಇದರಿಂದ ಇನ್ನಿಷ್ಟು ರೇಗಿದಂತಾಗಿ, ಕಣ್ಣೀರು ಸುರಿಸಹತ್ತಿದಳೆಂದರೆ, "ಬಿಡು ಬಿಡು ಅಳತೀದ್ಯಾಕ? ನಮಗ ಮುಂದ ಮದಿವ್ಯಾಗಾಕ ಬೇಶಾತೇಳು. ನಾಕ ಮಂದಿಗೆ ಗೊತ್ತಾಗಲಿ ಹೀ೦ಗರ, ನಾನೂ ನೀನೂ ಒಂದ್ಮನಸಿ ನಾವರದೇವಂತ ” ಎಂದು ಮರುಕ್ಷಣವೇ ಸಮಾಧಾನ ಹೇಳಬೇಕು ****