ವಿಷಯಕ್ಕೆ ಹೋಗು

ಪುಟ:ಹೂಬಿಸಿಲು-ಶ್ಯಾಮಲಾದೇವಿ.pdf/೧೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ನಡೆದುಬಂದ ಲಕ್ಶ್ಮಿ
೯೯


ಇತ್ತ ಷಷ್ಠಿಯ ದಿವಸ ಮುಂಜಾನೆ ಎಂಟು ಗಂಟೆಗೆನೇ ಎಲ್ಲಮ್ಮನ ಗುಡ್ಡದಲ್ಲಿ, ಓಲೇಕಾರ ಭೀಮಣ್ಣನು ದ್ಯಾಂವಕ್ಕನಿಗೆ ಹಠಾತ್ತಾಗಿ ಭೆಟ್ಟಿಯಾದನು.

"ಏನಪಾ ಎಂಣಾ, ಊರ ಕಡೆ ಎಲ್ಲಾ ಸುಕಾನ? ದೇವಿಗೆ ಬಂದ್ಯಾ? ಅಲ್ಲಪಾ, ನನ್‌ ಮಗಾ ಎಲ್ಲ್ಯಾರ ನಿನಗ ಕೂಡಿದ್ನೋ ಹ್ಯಾಂಗ? ಅವನೂ ಪಾಡದಾನ? "

" ದ್ಯಾಂವಕ್ಕಾ, ನಾ ಗುಡ್ಡಕ ಬಂದದ್ದು ದೇವೀ ಜಾತ್ರಿಗೂ ಅಲ್ಲಾ, ದರ್ಸಣಕ್ಕೂ ಅಲ್ಲಾ. ಆ ನಿನ್ನ ಮಗನ ಸುದ್ಧೀನ ಹೇಳಾಕ ಪುರಮಾಶೇ ಬಂದೇನಿ."

"ಅಯ್ಯs, ಅದೇನಪಾ ಸುದ್ದೀ ನನ್‌ ಮಗಂದೂ? ಏನಾಗೇತ್ಯೋ ಎಣ್ಣಾ ನನ್ನ ಮಗ್ಗ? "

"ದ್ಯಾಂವಕ್ಕಾ, ಸ್ವಲ್ಪ ನಿದಾನದಿಂದ ಕೇಳು. ನಿನ್‌ ಮಗಾ ಆ ಸೆರೆಬಡಕ ಗಾಂಜಿಬಡಕ ಸೂಳೇಮಗಾ ಗಡ್ಯಾ ಅದಾನಲ್ಲಾ—ಆ ಗಡ್ಯಾನ ಹೇಣ್ತಿಲ್ಲ..."

"ಯಾರು ದುರ್ಪತೆ? ಆಕೀ ಸಂಗಾಟ-ಆಕೀ ಗಂಡನ ಸ:ಗಾಟ ಏನ್‌ ನ್ಯಾಯಾ-ಗೀಯಾ ಹೂಡ್ಯಾನೇನ್ಮತ್ತ? "

"ಛೀ ನಮ್ಮವ್ವಾ. ಅಟ ಕೇಳ್ಯಾರ ಕೇಳವಲ್ಲಿ. ಆ ದುರ್ಪತಿನ್ನ ಓಡಿಸಿಗೊಂಡಕ್ಯಾರಾ ಹೋಗ್ಯಾನಂತ, ಹುಣ್ಣವಿ ದಿನಾನs ರಾತರ್‍ಯಾಗ ಮುಂಬಯಿಗೆ."

"ಅಟ್ಟ, ರೊಕ್ಕೆಲ್ಲಿಂದ ಬರ್ತಾವೋ, ಎಣ್ಣಾ ನಂನ್‌ ಮಗನ ಹಂತ್ಯಾಕ? ಹುಣ್ಣಿವಿ ದಿನಾ ನಾನ ಇಲ್ಲಿಂದ ಹೋಗುವಾಗ ಜುಕ್ಕಾನ ಜುಲಮೀಲೆ ನಾಕಾರ್‌ ರೂಪಾಯಿ ಕೊಟ್ಟ ಕಳಸೇನಿ."

"ನಾಕಾರ್‌ ಯಾಕವ್ವಾ? ಮನ್ಯಾಗಿನ ನಿನ್ನ ವಂಕೀ ಜೋಡೂ ಸರಗೀನೂ ಒಯ್ಧಾನಂತ; ಎಷ್ಟೋ ರೂಪಾಯಿನೂ ಒಯ್ದಾನಂತ.