ಎರಡುನೂರು ರೂಪಾಯಿಗಳ ಮೇಲೆ ಸೋಡಪತ್ರವಾಗಿ ಹೋಯಿತು.
ಮರುವಾರವೇ ದ್ಯಾಂವಕ್ಕನ ಮಗನಾದ ಸಾದೇವನ ಮದುವೆ ದ್ರೌಪದಿಯ ಕೂಡ-ಒಂದಿತ್ತು, ಒಂದಿಲ್ಲವಾಗಿ ಆಗಿಹೋಯಿತು.
ಇದೆಲ್ಲ ಸುದ್ದಿಯು ಹರಕು ಮುರಕಾಗಿ ಜನರ ಬಾಯಿಂದ ನಮಗೆ ತಿಳಿದಿತ್ತು. ಮದುವೆಯಾದ ನಾಲ್ಕಾರು ದಿನಗಳಲ್ಲಿ ದ್ಯಾಂವಕ್ಕನು ಕಡ್ಲೀಗಿಡದ ಹೆಡಿಗೆಯನ್ನು ತಲೆಯ ಮೇಲೆ ಹೊತ್ತುಕೊಂಡು, ಕಿತ್ತಳೇ ಹಣ್ಣಿನ ಬುಟ್ಟಿಯೊಂದನ್ನು ಟೊಂಕದ ಮೇಲಿಟ್ಟುಕೊಂಡು, ಮಲ್ಲಿಗೆ ಹೂವಿನ ತಟ್ಟೆಯೊಂದನ್ನು ಹೊತ್ತಿರುವ ಒಬ್ಬ ತರುಣಿಯನ್ನು ಬೆನ್ನಿಗೆ ಹಚ್ಚಿಕೊಂಡು ಬಂದು "ಬಾಯಾರ” ಎಂದಳು.
ಅವಳ ಸುದ್ದಿಯನ್ನು ಅವಳ ಬಾಯಿಯಿಂದ ತಿಳಿದುಕೊಳ್ಳಬೇಕೆಂಬ ಲವಲವಿಕೆಯು ಮೊದಲೇ ನನಗಿತ್ತು. ಅವಳ ಧ್ವನಿಯನ್ನು ಕೇಳಿದ ಕೂಡಲೆ ಒಂದೇ ಜಿಗಿತಕ್ಕೆ ಹೊರಗೆ ಬಂದೆ.
ಅವಳ ಆಗಿನ ಒಣಗಿದ ಮುಖವನ್ನೂ ಕೆದರಿದ ತಲೆಯನ್ನೂ ಅತ್ತತ್ತು ಬಾಡಿ ಬಾತಿದ್ದ ಕಣ್ಣುಗಳನ್ನೂ ಉಟ್ಟ ಹರಕು ಸೀರೆಯನ್ನೂ ತೊಟ್ಟ ಚಿಂದೀ ಕುಪ್ಪಸವನ್ನೂ ನೋಡಿ, ನನಗೆ ಕಳವಳವಾಯಿತು.
“ ಏನ್ ದ್ಯಾಂವಕ್ಕ, ಏನಿದು ನಿನ್ನಾಕಾರ ? ಅರಿಷ್ಟಾದೇವಿ ಲಕ್ಷ್ಮಿನ್ನೋಡಿಸಿ ನಿನ್ನ ಮುಕ್ಕಾರಿ ಬಿಟ್ಟೇನು ?"
"ಅಯ್ಯೋ ಬಾಯಾರ-" ಗೋಳೋ ಎಂದು ಮೊದಲು ಮನದಣಿ ಅತ್ತಳು. ಆ ಬಳಿಕ ಒಂದೂ ಬಿಡದಂತೆ ಎಲ್ಲವನ್ನೂ ಹೇಳಿ 'ನನಗೇನ ತುಸು ತ್ರಾಸಾತ್ರೆ ? ' ಎಂದಳು.
"ಅಲ್ಲವ್ವಾ, ಯಾವಾಕಿ ಸಲುವಾಗಿ ಇಷ್ಟೆಲ್ಲಾ ಕಷ್ಟಾತೂ, ಆಕಿನ್ನ ಮತ್ತೆ ಮನೀ ಸೊಸಿನ್ನ ಮಾಡಿಕೊಂಡ್ಯಲ್ಲಾ, ಇದ್ಯ್ಹಾಂಗಾತು?"