ಆ ತಂದೆಮಕ್ಕಳಿಬ್ಬರೂ ನಿರ್ವಾಹವಿಲ್ಲದೆ ಮುಂಬಯಿಯ ಕಡೆಗೆ ಹೊರಟುಹೋದರು.
ಇತ್ತ ಕ್ಯಾರಕೊಪ್ಪದ ಗೌಡರ ಮಗ ಶಿದ್ಧಿಂಗಗೌಡನೊಡನೆ ನಿಶ್ಚಯವಾಯಿತು. ಬೇಕಾದಷ್ಟು ಬೋರಾಡಿದಳು, ಆದರೂ ಅವಳ ಸುತ್ತು ಮುತ್ತಲಿನ ನರರಾಕ್ಷಸರಲ್ಲಿ ಒಬ್ಬನಿಗೂ ದಯಬರಲಿಲ್ಲ. ನಿಶ್ಚಯದ ದಿವಸ ಇಬ್ಬರು ಮದುಮಕ್ಕಳನ್ನು ಬಾಜೆ- ಬಜಾವಣೆಗಳೊಂದಿಗೆ ಮೆರೆಯಿಸುತ್ತ, ಊರಮುಂದಿನ ಶಂಕರಲಿಂಗನ ದೇವಾಲಯಕ್ಕೆಂದು ನಿಬ್ಬಣ ಹೊರಡಿಸಿದರು. ಎತ್ತಿನ ಬಂಡೆಯ ಮೇಲೆ ಅಡ್ಡವಾಗಿ ತೂಗುಮಂಚವನ್ನು ಕಟ್ಟಿ, ಅದರ ಮೇಲೆ ಹಾಸಿ ಅವರಿಬ್ಬರನ್ನು ಸಿಂಗರಿಸಿ ಕುಳ್ಳಿರಿಸಿದ್ದರು.
ಅರ್ಧದಾರಿಗೆ ಮೆರವಣಿಗೆಯು ಬರುತ್ತಿರುವಾಗ ಲೀಲೆಗೆ ಬಿಕ್ಕು ಹೆಚ್ಚಾಗಿ ಓಕರಿಕೆಗಳು ಬರಹತ್ತಿದವು; ಅಳುವು ಒಂದೇ ಸವನೆ ನಡೆದಿತ್ತು; ಇಷ್ಟು ಮುಂದಕ್ಕೆ ಹೋಗುತ್ತಿರುವಷ್ಟರಲ್ಲಿ ಎಲ್ಲ ವಾಂತಿಯಾಗುವದೋ ಎಂದವಳೇ ಸಾಹಸಬಟ್ಟು ಟಣ್ಣನೆ ಕೆಳಗೆ ಜಿಗಿದಳು. ಕಲಿತ ಹೆಂಡತಿ ಸಿಕ್ಕಳೆಂಬ ಉಬ್ಬಿನಿಂದ ಬಳಿಯಲ್ಲಿಯೆ ಕುಳಿತ ಬಲಿತ ಕೋಣನು ಗಾಬರಿಯಾಗಿ ಎಲ್ಲರಿಗೂ "ನಿಇಲ್ಲಿರಿ, ನಿಲ್ಲಿರಿ' ಎಂದು ಕೂಗಿದನು. ಲೀಲಾವತಿಯು ಅಲ್ಲಿಯೇ ಒಂದು ಮಗ್ಗಲಿಗೆ ಹೋಗಿ ಬೊಟ್ಟು ಹಾಕಿ ವಾಂತಿ ಮಾಡಿಕೊಂಡಳು. "ಭಾಳ ಆಯಾಸ ಪಟ್ಟಗೊಂಡಾಳ-ಇಂದಿನ ಹೊಳಿಗಿ ಈಕಿಗೆ ದಕ್ಕಿಲ್ಲಾ” ಎಂದು ಜನರು ಆಡಿಕೊಂಡರು. 'ನಿರು-ನೀರು' ಎಂದು ಕೂಗಿ ಬಾಯಿಬಿಟ್ಟಳು; 'ಕಣ್ಣಿಗೆ ಕತ್ತಲೆ ಬರುವದು' ಎಂದು ಬೋಲಿ ಹೊಡೆಯುತ್ತ, ಸೆರಗು ಸಾವರಿಸುತ್ತ, ಎದುರಿಗಿದ್ದ ಟಪಾಲುಪೆಟ್ಟಿಗೆಗೆ ಧಡಕ್ಕನೆ ಹಾಯ್ದವಳೇ ಬಿದ್ದು ಬಿಟ್ಟಳು............
ಹೇಗಾದರೂ ಚೇತನಗೊಂಡವಳು ಎದ್ದಳು. ಒಮ್ಮೆ ಮೆರವಣಿಗೆ ತೀರಿಸಿಕೊಂಡು ಮನೆಗೆ ಬಂದರು. ಇನ್ನೆರಡೇ ದಿನಕ್ಕೆ ಮದುವೆ