ಪುಟ:ಹೂಬಿಸಿಲು-ಶ್ಯಾಮಲಾದೇವಿ.pdf/೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೩೬

ಹೂಬಿಸಿಲು

ಮಂಗಳವಾರ ಮಧ್ಯಾಹ್ನಕ್ಕೆ ಸಂಬಳವು ಕೈಯಲ್ಲಿ ಬಿದ್ದಿತೆಂದರೆ ತೀರಿತು, ಬುಧವಾರ ಸಾಯಂಕಾಲದ ವರೆಗೆ ಮೈ ನೋವಿನ ನಿಮಿತ್ತ ಹೇಳಿ ಕಳುಹಿಸಿ ನಮ್ಮ ಮನೆಯ ಕಡೆಗೆ ಹಣಿಕಿಹಾಕುತ್ತಿದ್ದಿಲ್ಲ. ಈ ಮಾತು ಸಹ ನಮ್ಮ ಮಾವಂದಿರ ಜೀವಮಾನದಿಂದ ನಡೆದು ಬಂದ ಮಾತೆ ಆಗಿತ್ತು. ಈ ಬಗ್ಗೆ ನನಗೆ ತಡೆದೂ ತಡೆದೂ ಸೋಜಿಗ ಶಂಕೆಗಳುಂಟಾಗುತ್ತಿದ್ದವು; ತಿಳಿದುಕೊಳ್ಳಬೇಕೆಂಬ ಲವಲವಿಕೆಯೂ ಆಯಿತು.

ಉಳಿದ ಆಳುಗಳಂತೆ ನಮ್ಮ ದಾಜೀಬಾನು ಮನಸಿನಲ್ಲಿ ಸಿಟ್ಟು ಹಿಡಿಯುವವನಲ್ಲ, ಎಷ್ಟು, ಅಂದರೂ ಆಡಿದರೂ ನಗೆಮುಖದಿಂದಲೇ ಇರುವಷ್ಟು ಆವನ ಸ್ವಭಾವ ಒಳ್ಳೆಯದು; ದಾಜೀಬಾನು ನಮ್ಮ ಪುಟ್ಟ ಮುರಲೀಧರನನ್ನು ಒಳ್ಳೆಯ ಪ್ರೀತಿಯಿಂದ ಆಡಿಸುತ್ತಾನೆ, ಮಗು- ನನ್ನಾಡಿಸುವಾಗ ಅವನನ್ನು ನೋಡಿದರೆ, ಅವನು ಕೆಲಸಕ್ಕೆ ತಪ್ಪಿಸಿ- ದಾಗಿನ, ಕೆಲಸಗಳನ್ನು ಕೆಡಿಸಿದಾಗಿನ ಸಿಟ್ಟು ಒಮ್ಮೆಲೆ ಇಳಿದು ಬಿಡುವದು; ದಾಜೀಬಾನಂತಹ ಮಕ್ಕಳನ್ನು ಹೆತ್ತ ತಾಯಿಯಂತೆ ಆಡಿಸುವ ಆಳುಮಕ್ಕಳು ಸಿಕ್ಕುವದು ದುರ್ಲಭವೆನಿಸುವದು. ಹೀಗೆ ನಮ್ಮವರ ಮುಂದೆ ಆಡಿ ತೋರಿಸಿದರೆ, ಅವರು ಕೂಡಲೆ ಸಿಟ್ಟಾಗಿ "ನಿನಗೇನ ತಿಳಿತದ ? ಪ್ರತಿ ಮಂಗಳವಾರ ಮಧ್ಯಾಹ್ನದಿಂದ ಬುಧವಾರ ರಾತನಕಾ ನನ್ನ ಆಫೀಸಿನೊಳಗೆ ಕಾಲಿಟ್ಟು ನೋಡು, ಕಸಾ ಎಷ್ಟ ಬಿದ್ದಿರತದಂತ!” ಎನ್ನುವರು,

"ಪ್ರತಿಮಂಗಳವಾರಕ್ಕ ಯಾಕ ತಪ್ಪಪಾ ದಾಜೀಬಾ ?"

"ಬಾಯಿ, ಬ್ಯಾಂಕಿನ ಕಡಿತೇ ಹೋಗಬೇಕಾಗತೈತಿ......."

"ಯಾವ ಬ್ಯಾಂಕೋ ? "

ಅಲ್ಲೈತೆಲ್ರಿ ಹುಬ್ಬಳ್ಳಾ ಗ ಅದ್ಯಾವದೋ ಅರಬ್ಬನ್ ಬ್ಯಾಂಕಂತ ಅಂತಾರೆವ್ವಾ-ಅದS ನೋಡ್ರಿ.”