"ಅಯ್ಯ, ನಿಮಗ ಗೊಂತ ಇಲ್ಲೇನs ನನ್ನ ಹಡದವ್ವಾ,.......
ಕುಡಿಯೂದ್ರೀ ? ನಿಮಗ ಗೊತ್ತಿದ್ದೀತಂತ ಮಾಡಿದ್ನಿ ಬಿಡ್ರಿ
ಹಾಂಗಾರ, ನಾ."
"ಛೀ ನನ್ನವ್ವಾ, ನನಗ ಗೊತ್ತಿಲ್ಲ ಬಿಡು."
"ದರಾ ಮಂಗಳವಾರಾ ಇದ್ದದ್ದನ್ರೇ. ತಮ್ಮೆದುರಿಗೆ, ರಾವಸಾಬ್ರೆದುರಿಗೆ ಶೆರೆ ಕುಡದ ಬರಾಕ ನಾಚಿಗೊಂಡು, ಮೈನೋವೆದ್ದಿರತೈತೆಂತ ಮನ್ಯಾಗ ಬಿದ್ದಿರತಾನ್ರೀ, ಬುಧವಾರಾ ಮಧ್ಯಾನ್ಹತನಕಾ !!"
"ಓಹೋ, ಮತ್ತ ಮಂಗಳವಾರಕ್ಕೊಂದ್ರೂಪಾಯದಂತ ಹುಬ್ಬಳ್ಳೀ ಒಳಗ ಠೇವಿಡತಾನಂತೆಲ್ಲಾ, ಅದರ ಸಲುನಾಗೀನೆ ಹುಬ್ಬಳ್ಳಿಗೆ ಹೋಗಿರತೇನಿ ಅಂತೆ ನಾನ್ನ ಮುಂದ ಹೇಳಿದಾ. ಹಾಂಗಾರ ಠೇವಿಡೋದರs ಖರೇನೊ? ಸುಳ್ಳೋ ?"
"ಐ ಕೋಡಿ ಅದೇನ ಇಡತೈತ್ರೀ ಬಾಯಾರ? ಮಕ್ಕಳೂ ಮೊಮ್ಮಕ್ಕಳೂ ಕಂಡ್ರೂ ಸಂಕಾ ಕುಡ್ಯಾಣ ಬಿಡುದಾಗವಲ್ದೂ...."
ಆಗ ನನಗೆಲ್ಲವೂ ಹೊಳೆಯಿತು; ನನ್ನ ಸಮಸ್ಯೆ ಬಗೆಹರಿಯಿತು. ದಾಜೀಬಾನಿಗೆ ನಾನು, ಒಂದೂವರೆ ಸಾನಿರ ರಕಮನ್ನು ಕೂಡಿಸಿರಬಹುದೆಂದಾಗ ಆತ ಹಾಕಿದ ನಿಟ್ಟುಸಿರಿನ ಅರ್ಥವು ಈಗ ನನಗಾಯಿತು; ಆತನ ಗುಟ್ಟು ರಟ್ಟಾಯಿತು: ಆತನ ಹುಬ್ಬಳ್ಳಿಯ ಸಮಾಚಾರವೆಲ್ಲವೂ ಸುಳ್ಳೆಂದು ಮನವರಿಕೆಯಾಯಿತು. ಈ ವರೆಗೆ ಅವನು ವಾರಕ್ಕೊಂದು ರೂಪಾಯಿಯಂತೆ ಡಿಪಾಝಿಟ್ಟನ್ನು ಇಡುತ್ತ ಬಂದದ್ದು ಹುಬ್ಬಳ್ಳಿಯ ಅರ್ಬನ್ ಬ್ಯಾಂಕಿನಲ್ಲಿ ಠೇವಿಗಾಗಿ ಅಲ್ಲ, ಆದಕೆ ನಮ್ಮೂರ ಕಾಶೀಮಖಾನನ ಬ್ಯಾಂಕಿನಲ್ಲಿ ತೀರ್ಥ ಕುಡಿಯುವದರ ಸಲುವಾಗಿ !! 'ಕೆಲಸ ಸಿಕ್ಕ ಯಾಡ್ ವರ್ಸಕ್ಕ ಸುರೂ ಮಾಡೆನ್ರಿ ...' ಎಂಬ ಮಾತಿನ ಪೂರ್ಣ ಅರ್ಥವೂ ನನಗಾಗಆಯಿತು.