ಬೆಂಗಳೂರು ನಗರ. ಸಾಮಾನ್ಯವಾದದ್ದೊಂದು ಮನೆ, ಸುಂದರಮ್ಮ ತನ್ನ ತಂಗಿಯ ಪರದೇಶಿ ಮಗಳಾದ ಸರೋಜಳೊಡನೆ ಆ ಮನೆಯಲ್ಲಿದ್ದಳು. ಮೊದಲು ಅವರೆಲ್ಲರೂ ಧಾರವಾಡದವರೇ; ಆದರೆ ಸರೋಜಳ ತಂದೆಗೆ ಬೆಂಗಳೂರಿನಲ್ಲಿ ಚಾಕರಿ ಸಿಕ್ಕಿದ್ದರಿಂದ ಅವರು ಅಲ್ಲಿಯೆಸ್ವಂತ ಮನೆಮಾರು ಮಾಡಿಕೊಂಡಿದ್ದರು. ಸುಂದರಮ್ಮ ಬಾಲವಿಧವೆ; ತಂಗಿಯ ನೆರವಿಗೆಂದು ಬೆಂಗಳೂರಿಗೆ ಬಂದಿದ್ದಳು. ಸರೋಜಳು ಕೇವಲ ಒಂದು ವರ್ಷದ ಮಗುವಿರುವಾಗಲೆ ಅವಳ ತಾಯಿ-ತಂದೆಗಳು ಪ್ಲೇಗಿನ ಪಿಡುಗಿಗೆ ತುತ್ತಾದರು. ಸಾಯುವಾಗ ತಾಯಿಯ ಮೈ ಮೇಲೆ ಪ್ರಜ್ಞೆಯೇ ಇರಲಿಲ್ಲ; ಆದರೆ ತಂದೆಗೆ ಮಾತ್ರ ಹರಣ ಹಾರುವ ನರೆಗೂ ಎಚ್ಚರವಿದ್ದಿತು. ಸರೋಜಳನ್ನು ಅವರು ಸುಂದರಮ್ಮನ ಉಡಿಯಲ್ಲಿ ಹಾಕಿ ಅವಳ ಹೆಸರಿನಿಂದ ಮಾಡಿದ ಆಸ್ತಿ-ಪಾಸ್ತಿಗಳ ಕಾಗದಗಳನ್ನು ಸುಂದರಮ್ಮನ ವಶಕ್ಕೆ ಕೊಟ್ಟು ತೀರಿದರು. ಮುಂದೆ ತನ್ನ ಗತಿಯೇನೆಂದು ಕೇಳಿದಾಗ, ಹೇಗೂ ಸರೋಜಳು ಮದುವೆಯಾಗಿ ಹೋಗತಕ್ಕವಳೆಂದು ತಾವಿದ್ದ ಮನೆಯನ್ನೇ ಅವಳ ಹೆಸರಿನಿಂದ ಆಗಿಂದಾಗ ಬರೆಯಿಸಿದ್ದರು.
ಸುಂದರಮ್ಮನು ಸಹ ಸರೋಜಳನ್ನು ಅತ್ಯಂತ ಪ್ರೀತಿಯಿಂದ ಕಾಣುತ್ತಿದ್ದಳು; ಸರೋಜಳಿಗೀಗ ಹದಿನೇಳು ತುಂಬುತ್ತ ಬ೦ದಿತ್ತು. ಮದುವೆಗೆ ಯೋಗ್ಯಳಾಗಿದ್ದಳು. ಅಲ್ಲಿ ಇಲ್ಲಿ ಎಷ್ಟೋ ಕಡೆಗೆ ಮನೆತನಗಳೂ ಬಂದಿದ್ದವು. ಸುಂದರಮ್ಮನ ಮನಸಿಗೆ ಅವುಗಳಲ್ಲೊಂದೂ ಬಂದಿರಲಿಲ್ಲ. ಸರೋಜಳೇನು-ತಾನಾಯಿತು, ತನ್ನ ಅಭ್ಯಾಸವಾಯಿತು. ಅವಳಾಗ ಐದನೆಯ ಫಾರಂನಲ್ಲಿ ಓದುತ್ತಲಿದ್ದಳು. ಅವಳಿಗಾಗ ತನ್ನ ಮದುವೆಯ ವಿಚಾರವೆ ಬಂದಿರಲಿಲ್ಲವೆಂತಲೋ ಅಥವಾ ಅವಳಿನ್ನೂ ಅದಾರ ಮೋಹಜಾಲದಲ್ಲಿಯೂ ಬಿದ್ದಿರಲಿಲ್ಲವೆಂತಲೋ, ಅವಳಿಗೆ ಮದುವೆಯೇ ಸದ್ಯಕ್ಕೆ ಬೇಕಾಗಿದ್ದಿತೆಂತಲೋ-ಯಾವುದೂ ತಿಳಿಯದು-ಅವಳೇನೊ ತನ್ನ ಮಟ್ಟಿಗೆ ಮದುವೆಯ ವಿಚಾರವನ್ನು ಸ್ವಂತ ಎಂದೂ ಮಾಡಿರಲಿಲ್ಲ,