ದರೂ ಕೊಟ್ಟಿರುವೆವೆ? ವರದಕ್ಷಿಣೆ ವರೋಪಚಾರವೆಂದೇನೂ ಕೊಟ್ಟಿಲ್ಲ- ಕೊಡುವಂತಿಲ್ಲ. ಏನನ್ನೂ ವೆಚ್ಚ ಮಾಡದೆ ನೀನು ಲಕ್ಷಾಧೀಶಳಾಗಲಿಕ್ಕೆ ಹೊರಟಿರುತ್ತೀಯೆ. ಸುಮ್ಮನೆ ಇನ್ನೊಬ್ಬರನ್ನು ಕಟ್ಟಿಕೊಂಡು ಅಲ್ಲಿಗೆ ಹೋಗಿ ಅವರಿಗೆ ಭಾರ ಮಾಡೋಣ ಬೇಡ."
ಸರೋಜ ಸುಮ್ಮನಾದಳು ಮರುದಿವಸ, ಅಂದರೆ ಮದುವೆಯ ದಿವಸವೇ ಸಾಯಂಕಾಲದ ಗೋಧೂಳೀ ಮುಹೂರ್ತಕ್ಕೆ ಸ್ಟೇಶನ್ನಿಗೆ ಬಂದರು.
ಕನ್ಯೆಯನ್ನು ನೋಡಲು ರಾಯರೊಡನೆ ಹೋಗಿದ್ದ ಮುದುಕ ಕಾರಕೂನನೊಬ್ಬನು, ಒಬ್ಬಿಬ್ಬರು ಮುತ್ತೈದೆಯರು ಇವರೊಡನೆ, ರಾಯರ ಕಾರು ಅವರನ್ನು ಸ್ವಾಗತಿಸಿ ಕರೆದೊಯ್ಯಲು ಸ್ಟೇಶನ್ನಿಗೆ ಬಂದಿದ್ದಿತು.
"ವರದಕ್ಷಿಣೆ ಕೊಟ್ಟು, ತಮ್ಮ ಹುಡುಗಿಯರ ಸಲುವಾಗಿ ಮನೆಮಾರುಗಳನ್ನು ತೊಳೆಯಲು ಸಿದ್ಧರಾದ ತಂದೆತಾಯಿಗಳಿಗೆ ಒಳ್ಳೆಯ ಅಳಿಯನು ಸಿಕ್ಕದೇ ಇರೋ ಕಾಲ. ಏನನ್ನೂ ಕೊಡದೆ ನಮಗೆ ಇಷ್ಟೊಂದು ಅದರ ಯಾಕೆ ಅಪ್ಪಾ ?" ಸುಂದರಮ್ಮನೆಂದರು.
"ಇರ್ಲೆ, ನಮ್ಮವ್ವಾ, ಬರ್ರಿ-ಬರ್ರಿ, ಲಗ್ನಕ್ಕ ಎರಡs ತಾಸವ- ಲಗೂ ನಡೀರಿ"ಕಾರಕೂನನೆಂದನು.
ಮನೆಯಲ್ಲಿ ಒಂದು ಪ್ರಶಸ್ತವಾದ ಕೋಣೆಯನ್ನು ಶೃಂಗರಿಸಿ ತಾಯಿಮಗಳಿಗೆ ಇಳಿದುಕೊಳ್ಳಲಿಕ್ಕೆಂದು ಇಟ್ಟಿದ್ದರು. ಹುಡುಗಿಗೆ ಕೂಡಲೆ ಮುತ್ತೈದೆಯರು ಸುಗಂಧದ ಎಣ್ಣೆಯನ್ನು ಹಚ್ಚಿ ಎರೆದು, ಜರತಾರಿಗಳನ್ನು ಉಡಲು ತೊಡಬ ಕೊಟ್ಟರು. ಹೊಟ್ಟೆ ತುಂಬ ಬಗೆಬಗೆಯ ತಿನಸುಗಳ ಉಪಹಾರವಾಯಿತು.
ಬಳಿಕ ಸರೋಜಳಿಗೆ ಮುತ್ತಿನ ಮಂಡಕಳ್ಳಿಯನ್ನು ಕಟ್ಟಿ ಮೈತುಂಬ ಮುತ್ತುರತ್ನದ ಆಭರಣಗಳನ್ನು ತೊಡಿಸಿ, ಅವಳನ್ನು