ಹಾಡಲಿಕ್ಕೆ ನನಗೆ ಚೆನ್ನಾಗಿ ಬರುತ್ತಿರಬೇಕೆಂತಲೂ ತನಗನಿಸಿತೆಂದು ಹೇಳಿದ್ದರಲ್ಲ ? ಅಂದರೆ ಇಂಪು-ಕರ್ಕಶಗಳ ಭೇದವೇ ಇಲ್ಲೇನೋ ಇವರಿಗೆ! ಇವರಿಗೆಲ್ಲಿಯೊ ಹುಚ್ಚು ಹಿಡಿದಂತೆ ಕಾಣುತ್ತದೆ-ನಿಜ, ಇವರಿಗೆ ಹುಚ್ಚೆ ಹಿಡಿದಿದೆ.)
ಭಾವನವರು ಸುಮ್ಮನಿದ್ದರು.
ಅವರು:-ವಯಸ್ಸೂ ಸ್ವಲ್ಪ ಹೆಚ್ಚೇ ಇದ್ದಂತಿದೆ.
ಭಾವನವರಿಂದ ಉತ್ತರ ಬರಲಿಲ್ಲ.
(ನನಗೆ ವಯಸ್ಸು ಹೆಚ್ಚಾಗಿದೆಯೆ ? ಇನ್ನೂ ೧೪ರಲ್ಲಿ ಇರುವಾಗ ವಯಸ್ಸು ಹೆಚ್ಚಂತೆ ! ತಾವೇ ನನಗಿನ್ನೂ ತಕ್ಕವರಾಗದೆ, ಹಿರಿಯರೇ ಆದರು.... ಇಷ್ಟೆಲ್ಲ ಗೊಂದಲವೇಕೆ ? ಇದೇನು, ಭಾವನವರು ಪ್ರತಿಯೊಂದು ಮಾತಿನಲ್ಲಿ ಸೋಲುತ್ತಿರುವರಲ್ಲ ? ಅವರಿಗೆ ನಮ್ಮ ಹುಡುಗಿಯಂತೂ ಹೀಗೆ ಇದೆ, ಬೇಕಾದರೆ ಮಾಡಿಕೊಳ್ಳಿರಿ, ಇಲ್ಲವಾದರೆ ಬಂದ ಹಾದಿಗೆ ಸುಂಕವಿಲ್ಲವೆಂದು ಹೊಗಿರೆಂ'ದು ಹೇಳಿ ಕಳಿಸಿಬಿಡಬಾರದೇ ? ಭಾವನಿಗೂ ಎಲ್ಲಿಯೋ ಹುಚ್ಚು ಹಿಡಿದಂತೆ ಕಾಣುವದು.)
ಆವರು:-ಕಳೆದ ವಾರ ಪಂಢರಪುರಕ್ಕೆ ಹೋಗಿ ಬಂದೆನು. ನನ್ನ ಮನಸ್ಸಿಗೆ ಬಂದಿದೆ. ನನ್ನ ಮನಸ್ಸಿಗೆ ಬಂದು ಉಪಯೋಗವಿಲ್ಲ, ನಮ್ಮ ತಾಯಿಯವರು ನೋಡಿ ಸಮ್ಮತಿಸಬೇಕು; ಅ೦ದರೆ ಕೆಲಸವು ಪೂರ್ಣವಾದಂತಾಯಿತು.
(ಹಾಗಾದರೇನು ? ನನ್ನನ್ನು ವರಿಸುವ ಮಾತೇ ದೂರ. ಪಂಢರಪುರದ ಹುಡುಗಿ ಮನಸ್ಸಿಗೆ ಬಂದಿದೆಯಂತೆ ! ಹಾಗಾದರೆ ನನ್ನನ್ನು ನೋಡಲಿಕ್ಕೆ ಏಕೆ ಬರೋಣವಾಯಿತು ?)
ಅವರು :- ಮೈ-ಕೈಯಿಂದ ದುಂಡಗಿದ್ದು, ಗಟ್ಟಿ ಮುಟ್ಟಿಯಿದೆ; ನೀಳವಾದ ಕಣ್ಣುಗಳಿವೆ.