ಪುಟ:ಹೂಬಿಸಿಲು-ಶ್ಯಾಮಲಾದೇವಿ.pdf/೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೬೪

ಹೂಬಿಸಿಲು

ಇದನ್ನೆಲ್ಲ ಸೂಕ್ಷ್ಮವಾಗಿ ನೋಡಿ ನನ್ನವರು ಬಹಳೆ ಕಳಕಳಿಯಿಂದ ಕೇಳಿದರು; “ಇದೇನು ಮನೋರಮೆ, ಮುಖಕ್ಕೊಮ್ಮೆಲೇ ಬಾಡಿಸಿದೆ? ಅಳುವಿಯೇಕೆ? ಏನಾಯಿತು? ಇಷ್ಟು ಉಲ್ಲಾಸದಿಂದ ಇಬ್ಬರೇ ತಿರುಗಾಡಲಿಕ್ಕೆ ಬಂದಿರುವಾಗ, ಗಳಿಗೆಯ ಹೊತ್ತನ್ನು ಇಬ್ಬರೂ ಮೋಜಿನಿಂದ ಕಳೆದು ಆನಂದಪಡೋಣ ಬೇಡವೆ? ಹೀಗೇಕೆ ಕಳೆಗುಂದಿದೆ? ಯಾಕೆ? ” ಇಷ್ಟೇ ಸಾಕಾಯಿತು ನನಗೆ; ಸಮಯವು ಸಾಧಿಸಲಿಕ್ಕೆ ನೆಟ್ಟಗಿದೆಯೆಂದವಳೇ, 'ತಾವು ನನ್ನನ್ನು ನೋಡಲಿಕ್ಕೆ ಬಂದಾಗ ನಮ್ಮ ಭಾವನವರೆದುರಿಗೆ ಕುರುಡಿ-ಕುಂಟಿಯೆಂದು ಕುಂದನ್ನೇಕೆ ಇಟ್ಟಿರಿ! ಸುಮ್ಮಸುಮ್ಮನೇ ಅಪವಾದ ಕೊಡಬೇಕೆ? ಅವುಗಳಲ್ಲಿ ಒಂದಾದರೂ ಕುಂದಿದೆಯೆ ನನ್ನ ಬಳಿ?.... ಮತ್ತೆ.... ಅಂಥಾ ಕುರುಡಿ- ಕುಂಟಿಯನ್ನು, ಪಾಪ ಈಗ ಮದುವೆಯಾದಿರಲ್ಲ ?....' ನನ್ನ ಮಾತು ಮುಂದೆ ಸಾಗಲಿಲ್ಲ; ಅಳುವು ಉಕ್ಕಿ ಉಕ್ಕಿ ಬಂದಿತು.

'ನಾನಾವಾಗ ಹಾಗೆಲ್ಲ ಅಂದೆ ? : ಅವರು ಮರುಕದಿಂದ ಮಾತನಾಡಿದರು. ಮನಬಂದಂತೆ ಮಾತಾಡಿ ಮರಳಿ ಈ ಮರುಕದ ಸೋಗು ನೋಡಿ ನನಗೆ ಸಿಟ್ಟು ಹಿಡಿಸಲಾರದಷ್ಟಾಯಿತು. 'ಭಾವಯ್ಯನವರಿಗೆ ಕೇಳಿಸಿಕೊಡುವೆನು, ನೆನಪಿಲ್ಲದಿದ್ದರೆ! ನನ್ನ ಕೂದಲು ಸಹ ದಪ್ಪ-ಬಿರುಸೆಂದವರೂ ತಾವೇ !! ಅಟ್ಟದ ಮೇಲಿನ ಕೋಣೆಯಲ್ಲಿ ಕುಳಿತಾಗ ಅ೦ದಿಲ್ಲವೆ ? ಪಂಢರಪುರದಲ್ಲಿ ಸಹ ಒಂದು ನೀಳಗಣ್ಣಿನ ಗಟ್ಟಿ ಮುಟ್ಟ ಹುಡುಗಿಯನ್ನು ನೋಡಿದ್ದನ್ನು, ನಿಮ್ಮ ತಾಯಿಯವರು ಅದನ್ನು ನೋಡಬೇಕೆಂದದ್ದನ್ನು, ಅವರಿಗಾಗಿ ಒಂದು 'ಕಾರು'ಕೊಳ್ಳಲು ಮನಸ್ಸಿದ್ದದ್ದನ್ನು ನೀವು ಹೇಳಲಿಲ್ಲವೆ ? ಈಗಲಾದರೂ ನೆನಪಾಗುವದೆ?'

ಅವರಿಗೇನು ನೆನಪಾಯಿತೋ ಏನೋ, ಒಮ್ಮೆಲೇ ನನ್ನ ಕೈ ಸೆಳೆದೊಗೆದು ಖೊಳ್ಳನೆ ನಕ್ಕರು. 'ಆ ವಿಷಯವೇ! ಅದೆಂದರೆ ನಾನೊಂದು ಕುದುರೇಗಾಡಿ ಕೊಳ್ಳಬೇಕೆಂದಿದ್ದೆ.. ಆ ವಿಚಾರ ಬದ-