ಎರಡು ಮಾತು
ನನ್ನ ಸಹಧರ್ಮಿಣಿಯ ಕಥಾ ಸಂಗ್ರಹವೊಂದನ್ನು ಜಯಕರ್ನಾಟಕ ಗ್ರಂಥಮಾಲೆಯ ಕುಸುಮವಾಗಿ ಪ್ರಕಟಿಸುವ ಸಂತೋಷಜನಕವಾದ ಸಂದರ್ಭವು ಇದೀಗ ಒದಗಿದೆ. ಅದು ತೀರ ಅಕಲ್ಪಿತವಾಗಿ ಬಂದಿತು. ಆಕೆ ನನಗೆ ಹಿಂದಕ್ಕೆ ಬರೆದ ಕೆಲವು ಪತ್ರಗಳಲ್ಲಿಯ ಕಥನಸರಣಿಯು ನನ್ನಲ್ಲಿ ಕೌತುಕವನ್ನುಂಟು ಮಾಡಿತು, ಆಗ “ ಪ್ರಚ್ಛನ್ನ ಕವಯಿತ್ರಿ ' ಯೆಂದು ವಿನೋದದಿಂದ ಆಕೆಯನ್ನು ಕರೆದಿದ್ದೆನು, ಅದು ನಾಲ್ಕಾರು ವರ್ಷಗಳ ಹಿಂದಿನ ಮಾತು. ಇಲ್ಲಿಯ ಕತೆಗಳನ್ನು ಹೇಳುವ ಬಗೆ, ಅವುಗಳಲ್ಲಿ ಮಿಡಿಯುವ ಜೀವ-ಇವು ಕತೆಗಾರ್ತಿಯು ಅಪಕ್ವ ದೆಸೆಯನ್ನು ದಾಟಿದುದನ್ನು ತೋರಿಸುತ್ತಿವೆಯೆಂದು ನನ್ನ ಭಾವನೆ, ಹೆಚ್ಚು ಬರೆಯುವುದು ಸಮಂಜಸವಾಗಲಿಕ್ಕಿಲ್ಲವಾದುದರಿಂದ ಓದುಗರಿಗೆ ಈ ಮಾತಿನ ನಿಷ್ಕರ್ಷೆಯನ್ನು ಒಪ್ಪಿಸುವೆನು.
ಆದರೂ, ಶ್ರೀ ಆನಂದಕಂದರು ಹೇಳಿರುವಂತೆ... ಉತ್ತರ ಕರ್ನಾಟಕದ ಸಾಹಿತ್ಯಕ್ಷೇತ್ರದಲ್ಲಿ ಪ್ರಥಮ ಪದಾರ್ಪಣ - ಮಾಡುತ್ತಲಿರುವ ಈ ಪ್ರಥಮ ಸ್ತ್ರೀಲೇಖಕರಿಗೆ ಸುಸ್ವಾಗತವನ್ನೀಯುವುದು ನನ್ನ ಕರ್ತವ್ಯ.
ಶ್ರೀ, ಜೈನೇಂದ್ರಕುಮಾರರ ಕಥಾಸಂಗ್ರಹವನ್ನು ಕನ್ನಡಿಸಿ ಕೊಡುವುದಾಗಿ ಮಾಡಿದ ಮೊದಲನೆಯ ನಿರ್ಣಯವು ತಪ್ಪಿ, ಏನೂ ನಿರೀಕ್ಷೆಯಿಲ್ಲದೆ ಈ ಕಥಾಲಹರಿಯನ್ನು ಗ್ರಂಥಮಾಲೆಯ ವಾಚಕರಿಗೆ ಸಲ್ಲಿಸಿದುದಾಯಿತು. ಇದರಲ್ಲಿಯ ' ನನ್ನನ್ನು ನೋಡಲಿಕ್ಕೆ ಬಂದಾಗ, ಎಂಬ ಕತೆಯು ಜಯಕರ್ನಾಟಕದ ೧೯೩೪ರ ಮಾರ್ಚ ತಿಂಗಳ ಸಂಚಿಕೆಯಲ್ಲಿ ಪ್ರಕಟವಾಗಿತ್ತು. 'ನಡೆದು ಬಂದ ಲಕ್ಷ್ಮಿ' ಹೋದ ವರ್ಷದ 'ನೀಳ್ಗತೆಗಳು' ಎಂಬ ಜ. ಕ. ಗ್ರಂಥಮಾಲೆಯ ಪ್ರಕಟನೆಯಲ್ಲಿ ಒಂದು ಕತೆಯಾಗಿದ್ದಿತು.
ಬೆಳಗಾವಿ ರಾಮಚಂದ್ರರಾಯರು
ಧಾರವಾಡ ತಾ, ೨೨-೧೨-೩೬