"ಎಲ್ಲಾ ಖರೇನಪ್ಪಾ, ಲಕ್ಷ್ಮೀದೇವಿ ನಮ್ಮಂಥಾ ಪಾಪಿಷ್ಠ ಮುಂಡೇರ ಮನಿ ಒಳಗ ಯಾತಕ್ಕ ಬಂದಾಳೇಳು. ಅಲ್ಲಿ ನಿನ್ನೂರೊಳಗೆ ಎಲ್ಲಾರೂ ಹುಂಬ ಜನರು, ನಮ್ಮನೀ ಬಾಗಿಲಿಗೆ ಕಲ್ಲು ಹೊಡೆಯೋದು, ಗದ್ದಲಾ ಮಾಡೋದು ಮಾಡತಿದ್ರೂ, ಅಲ್ಲಿರಲಿಕ್ಕೆ ಬ್ಯಾಸತ್ತು, ಮಾರಾಯರು ಬೆನ್ನಿಗೆ ಹಚಿಗೊಂಡು ಬಂದ್ರಂತ ಅವರ ಊರೊಳಗನs ಅವರ ಕಣ್ಣೆದುರಿಗೆ ಇದ್ದರ ಆತೂ ಅಂತ ಹೇಳಿ ಶಹರದೂರಿಗೆ ಬಂದು ಅಲ್ಲೀಕಿಂತಾನೂ ಇಲ್ಲಿ ಶಾಣೆ ಜನರ ಕಾಟ ಭಾಳ ಆಗೇದ. ಸಂಜಿ ಆಗೋಣಾ, ಬಾಗಿಲಿಗೆ ರಾಡೀ ಒಗಿಯೋದು, ಕಲ್ಲು ಹೊಡಿಯೋದು, ಸಿಳ್ಳು ಹಾಕಿ ಹಾಕಿ ಚೀರೋದು ಮಾಡ್ತಾರ, ಮಾಡಿಕೊವಲ್ರ್ಯಾಕ, ಆದರ ಒಳಗ ಅವರ ಪ್ರವೇಶ ಬ್ಯಾಡಾಂತ, ಅವರ ಆ ಲಕ್ಷ್ಮಿನ್ನ ಕೂಡೆ ಹೊರಗೆ ಹಾಕಿ ಬಾಗಲಾ ಹಾಕಿ ಬಿಟ್ಟರತೇನಿ. ಊಟಾ-ಗೀಟಾ ತೀರಿಸಿಕೊಂಡು ರಾತ್ರಿ ಒಂಭತ್ತಕ್ಕ ಬರತದ ಅವರ ಸವಾರಿ, ಆವಾಗನು ಎದ್ದು ಬಾಗಲಾ ತಗಿತೆನಿ. ಇರವಲ್ದ್ಯಾಕ, ಇಕಾ ನೀರು ತಗೊಂಡು ಕಾಲು ತೊಳಕೋ, ಅಡಿಗ್ಯಾಗೇದ ಊಟಾ ಮಾಡೋಣ.
ಪರಸ್ಪರರ ಕ್ಷೇಮಸಮಾಚಾರವನ್ನು ಕೇಳಿಕೊಳ್ಳುವದಾಯಿತು ಆ ಸುದ್ದಿ ಈ ಸುದ್ದಿಯಾಯಿತು. ಒಳ್ಳೆಯ ಆನಂದದಿಂದ ಇಬ್ಬರೂ ಉಂಡರು ತಿಂದರು. ತಂದೆಗೆ ವೀಳ್ಯವನ್ನು ಮಡಿಚಿಕೊಟ್ಟಳು. ಬೆಳ್ಳಿಯ ಸಣ್ಣ ತಟ್ಟೆಯಲ್ಲಿ ಕೆಲವು ಹಣ್ಣುಗಳನ್ನು ತಂದಿಟ್ಟಳು. ತಂಗಳುರೊಟ್ಟಿಯನ್ನು ಸಹ ಹೊಟ್ಟೆ ತುಂಬ ಕಾಣದ ಮುದುಕನಿಗೆ ಈ ರಾಜಠೀವಿಯ ಉಪಚಾರದಿಂದ ಹೊಟ್ಟೆ ತುಂಬಿತ್ತು, ಮನಸು ತೃಪ್ತಿ ಹೊ೦ದಿತು.
"ಇಷ್ಟೆಲ್ಲಾ ಆತಾ, ಈಗ ನಾಲ್ಕು ವರ್ಷಾತೂ ನೀ ನಮ್ಮನೀ ಬಿಟ್ಟು ಏನೇನ ಗಳಿಸಿದೆವ್ವಾ? ನಿನ್ನ ಮಾಲಕರು ನಿನ್ನ ಸಂಗತೀ ಹ್ಯಾಂಗಿದ್ದಾರ??"