ವಿಷಯಕ್ಕೆ ಹೋಗು

ಪುಟ:ಹೂಬಿಸಿಲು-ಶ್ಯಾಮಲಾದೇವಿ.pdf/೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಕರುಳ ಕತ್ತರಿ
೭೧

ಇತ್ತ ಸೆರೆಬಡಕ ಗದಿಗೆಪ್ಪನ ಮತ್ತು ಊರೊಳಗಿನ ಹಲಕೆಲವು ಪುಂಡ ಜನರ ಹಾವಳಿಯು ಹೆಚ್ಚು ಹೆಚ್ಚಾಗಲು ಚಂದ್ರಾ ಬೇಸತ್ತು, ತಾಯಿಯು ಬೇಡವೆಂದು ಬೇಕಾದಷ್ಟು ಹೇಳಿದರೂ ಕೇಳದೆ, ಜಗಳವಾದರೂ ಹೆದರದೆ, ಊರನ್ನು ಬಿಟ್ಟು ಬಂದು ಈಗ ನಾಲ್ಕು ವರುಷಗಳಾಗಿದ್ದವು. ಅವರ ಸಹವಾಸದಲ್ಲಿ ಅವಳು ಅತ್ಯಂತ ಸುಖಿಯಾಗಿದ್ದಳು.

ಆದರೆ ದೈವಕ್ಕೆ ಇವಳ ಸುಖವು ಸಹನವಾಗಲಿಲ್ಲ. ಗದಿಗೆಪ್ಪನ ತಲೆಯಲ್ಲಿ ಯಾರಾರೋ ಏನೇನನ್ನೋ ತುಂಬಿದರು. ಅಲ್ಲದೆ ಅವನು ದುಡಿದ ಹಣದಲ್ಲಿ ಸ್ವಲ್ಪವನ್ನು ಈಗ ಮನೆಗೆ ತಂದು ಬಾಳುವೆಗೆ ಕಳೆಯೆರಿಸಿದ್ದನು. ಚಂದ್ರವ್ವನಲ್ಲಿದ್ದುದನ್ನಷ್ಟು ಅಪಹರಿಸಿಕೊಂಡು ತಂದು ತನ್ನ ಪ್ರಪಂಚಕ್ಕೆ ಈಡು ಮಾಡಬೇಕೆಂದು ಅವನ ದುರಾಸೆ. ಎಂತಲೆ ಸವಿ ಸವಿ ಮಾತನಾಡಿ ಅವಳನ್ನು ತನ್ನೂರಿಗೆ ತರಲು ಬಯಸಿ ಅವಳಲ್ಲಿಗೆ ಬಂದದ್ದು.

ನಾಯಕರ ಒಪ್ಪಿಗೆಯನ್ನು ಬಲು ಪ್ರಯಾಸದಿಂದ ಪಡೆದು, ಚಂದ್ರವ್ವನು ತಂದೆಯೊಡನೆ ತನ್ನ ತವರುಮನೆಗೆ ಬಂದಳು. ಬಂದ ದಿನವೇ ರಾತ್ರಿಯಲ್ಲಿ ಅವಳ ತಾಯಿ ಅವಳಿಗಾಗಿ ನೀರು ಕುಸಿ, ಎಣ್ಣೆ ಹೂಸಿ ಎರೆದಳು..... ಆಹಾ! ಬಲು ದಿನಗಳ ತರುವಾಯ ಹಡೆದಮ್ಮನು ಹಚ್ಚಿ ಹೂಸಿದ ಎಣ್ಣೆಯು ಅವಳ ನೆತ್ತಿಗೆ ಅದೆಷ್ಟು ತಂಪನ್ನುಂಟು ಮಾಡಿತು !! ಒಬ್ಬಳಿಗಾಗಿಯೇ ಪಾಯಸದೂಟವು ಸಿದ್ಧವಾಗಿತ್ತು, ಚಂದ್ರವ್ವನು ಬೇಕಾದಷ್ಟು ಬಲವಂತಪಡಿಸಿದರೂ, ಚಿಕ್ಕ ಮಕ್ಕಳನ್ನು ಕೂಡ ಅವಳೊಡನೆ ಊಟಕ್ಕೆ ಕೂಡಿಸಲಿಲ್ಲ.

"ಆವೆಲ್ಲಾ ಮಕ್ಕಳು ಇದ್ದ-ಬಿದ್ದ ತಂಗಳಾ-ಬಂಗಳಾ ತಿನ್ನಲಿ, ಚಂದ್ರಾ, ನೀ ಸುಖಬಟ್ಟು ಬಂದಾಕಿ, ಹೊಟ್ಟೆ ತುಂಬ ಉಣ್ಣಾವ್ವಾ....." ಎಂದಳು ಸಣ್ಣವ್ವ.