ಪುಟ:ಹೂಬಿಸಿಲು-ಶ್ಯಾಮಲಾದೇವಿ.pdf/೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮುನ್ನುಡಿ

ನನ್ನನ್ನು ನಾನ ಅಭಿನಂದಿಸಿಕೊಳ್ಳಬೇಕಾಗಿದೆಯಾಗ ! ಕಾರಣವೇನೆಂದು ಕೇಳಿದರೆ, ಉತ್ತರ ಕರ್ಣಾಟಕದ ತೀರ ಹೊಸಬಗೆಯ ಗ್ರಂಥಕ್ಕೆ ಮುನ್ನುಡಿ ಬರೆಯುವ ಯೋಗ ನನಗೆ ಒದಗಿದೆ. ತುಂಗಭದ್ರೆಯಿಂದ ಉತ್ತರದ ಕನ್ನಡದಲ್ಲಿ ಲೆಕ್ಕಣಿಕೆಯನ್ನು ಹಿಡಿದ ಹೆಂಗುಸರೆ ಅಪರೂಪ; ಒಬ್ಬಿಬ್ಬರು ಇದ್ದಾರೆಯೆಂದು ಯಾರಾದರೂ ಹೇಳಿದರೂ ಸಂಪುಟರೂಪದಲ್ಲಿ ಇದುವರೆಗೆ ಯಾರ ಬೆಳಕಿಗೆ ಬಂದಿಲ್ಲ. ಹೂಬಿಸಿಲು : ಇದು ಉತ್ತರ ಕರ್ಣಾಟಕದ ಸಾಹಿತಿಯೊಬ್ಬರ ಮೊದಲನೆಯ ಗ್ರಂಥ; ಸ್ತ್ರೀನಿರ್ಮಿತ ಸಾಹಿತ್ಯಕ್ಷೇತ್ರದಲ್ಲಿಯೂ ಮೊದಲನೆಯ ಗ್ರಂಥ; ಉತ್ತರ ಕರ್ನಾಟಕದ ಇಂದಿನ ಸಾಹಿತ್ಯದ ಚರಿತ್ರೆಯನ್ನು ಬರೆಯತೊಡಗಿದಾಗ ಸ್ತ್ರೀವಿಭಾಗದದಲ್ಲಿ ಮೊದಲು ಹೆಸರುಗೊಳ್ಳಬೇಕಾದ ಗ್ರಂಥ. ಆ ಒಂದು ಭಾಗದ ಬೆಳಗಿನ 'ಹೂಬಿಸಿಲ'ನ್ನು ಹರಡಲಿಕ್ಕೆಂದು ಇದು ಮುಂದಡಿಯಿಟ್ಟಿದೆ.

ಈ ಸಂಗ್ರಹದಲ್ಲಿದ್ದುವುಗಳಲ್ಲಿ ಹೆಚ್ಚಾಗಿ 'ಸಣ್ಣ ಕತೆ'ಗಳೆ ಇರುವುವಾದರೂ ಸಣ್ಣ ಕತೆಗಳ ಒರೆಗೆ ಇಳಿಯದ ಒಂದೆರಡು ಸರಸ ಲೇಖನಗಳೂ ಇವೆ. ಇವೆಲ್ಲವುಗಳಲ್ಲಿಯೂ ಹೆಚ್ಚಾಗಿ ನಾವು ಕಾಣು ತಿರುವುದು ಸ್ವಭಾವಚಿತ್ರಣವನ್ನೆ. ವಸ್ತು ವಿಶೇಷವಾವುದನ್ನೂ ಒಳಗೊಂಡಿರದ 'ಮೂವರು ನಾಗರಿಕರು' 'ಮಹಾಶಿವರಾತ್ರಿ' ಎಂಬೆರಡು ಕೃತಿಗಳಂತೂ 'ಸ್ವಭಾವಚಿತ್ರ' ಎಂಬುದೊಂದು ಹೊಸ ಸಾಹಿತ್ಯಜಾತಿಯನ್ನು ನಿರ್ಮಾಣಮಾಡಿಕೊಂಡಿವೆ. 'ಮಧುಮತಿ', 'ಕ್ರಿಷ್ಟಿ'. 'ಶಾಂತಿ' ಯರ ಹುಡುಗತನದ ಅಜ್ಞಾನವೂ ತುಂಟತನವೂ ನಮ್ಮನ್ನು ಹೊಟ್ಟೆ ತುಂಬ ನಗಿಸುವುವು. ' 'ಮಹಾಶಿವರಾತ್ರಿ'ಯಲ್ಲಿಯ ಗೋವಿಂದನ ಎಳೆಯತನದ ರಸಿಕಜೀವನವು ಬೆಳೆದಾಗ ಹೇಗೆ ಇರುತ್ತಿದ್ದಿತಂಬುದನ್ನು ನೋಡುವ ಭಾಗ್ಯವನ್ನು ಲೇಖಿಕೆಯರು ತಂದುಕೊಡದಿರುವುದಕ್ಕಾಗಿ ಅರಮ‍‍‍ನಸ್ಸಿನವರಾಗುವೆವು.