ಓದಿಗೆ ಆಗ ಮಹತ್ತ್ವ ಕೊಟ್ಟು ತಮ್ಮೆಲ್ಲ ಮಕ್ಕಳನ್ನೂ ಶಾಲೆಗೆ ಕಳಿಸುವರೆಂದು ಅವರ ಮುಂದಿನ ಧೋರಣ, ನನಗೂ ಈ ವಿಚಾರವು ಸೈಯೆನಿಸಿತು.
ನನ್ನ ಕಡೆಯಿಂದ ಕೂಡಲೆ ಆಗಿಂದಾಗ ಕಲ್ಲಕತ್ತಿ (ಕಲ್ಕತ್ತೆ)ಗೆ ಹ್ಯಾಂಡ್-ಪ್ರೆಸ್ಸಿಗಾಗಿ ಆರ್ಡರ ಬರೆಯಿಸಿಕೊಂಡರು; ಮತ್ತು ದೊಡ್ಡ ದೊಡ್ಡ ಊರಿನ ವೃತ್ತ-ಮಾಸಿಕ ಪತ್ರಗಳ ಆಫೀಸುಗಳಿಗೂ ತಮ್ಮೆಲ್ಲ ಪತ್ರಿಕೆಗಳನ್ನು 'ಫ್ರೀ' ಕಳಿಸಬೇಕೆಂದು ಇಂಗ್ಲೀಷಿನಲ್ಲಿಯೇ ಬರೆಯಿಸಿದರು; ಅವರ ವಿಳಾಸಗಳು ನನಗೆ ಗೊತ್ತಿದ್ದುದರಿಂದ ಕೂಡಲೆ ಬರೆದುಬಿಟ್ಟೆ; ನನ್ನಿದಲೇ ಕಲಿತುಕೊಂಡು ಮಾಸ್ತರರು ಅವೆಲ್ಲ ಪತ್ರಗಳಿಗೂ ಕೂಡಲೇ ಇಂಗ್ಲೀಷಿನಲ್ಲಿಯೆ ಸುಂದರವಾಗಿ ಸಹಿ ಮಾಡಿದರು.
ಮುಂದೆ ನನ್ನ ರಿಝಲ್ಟು ಆಯಿತು; ಈಗಿನ ದಿನಮಾನಕ್ಕನು ಸರಿಸಿ ಕುಂಟುತ್ತ ಕೂರುತ್ತ ಪಾಸ್ ಕ್ಲಾಸಿನಲ್ಲಿ ತೇರ್ಗಡೆಯಾದೆ. ನಮ್ಮ ತಂದೆ ಹಮ್ಮಿಣಿ ಕಟ್ಟಿಕೊಂಡು ನನ್ನನ್ನು ಕಾಲೇಜಿನಲ್ಲಿ ನಡೆ.ನುಡಿಯ ಹಚ್ಚಲೆಂದು ಬಂದರು; ಒಂದು ವರುಷದ ವರೆಗೂ ನನಗೆ ಮುಂದೆ ಹಳ್ಳಿಯ ಸುದ್ದಿಯೇ? ತಿಳಿಯಲಿಲ್ಲ. ಹೆಡ್ ಮಾಸ್ತರರು ಮುದುಕರು... ಮರೆತರೋ ಏನೋ? ನಾನಂತೂ, ನನ್ನ ಡೌಲಿನಲ್ಲಿಯೇ ಕಾಲ ಕಳೆದು, ಅವರಿಗೊಂದು ಅಕ್ಷರವನ್ನೂ ಬರೆಯಲಿಲ್ಲ.
ಅಂತೂ ಮರುವರುಷ ಮೇ ತಿಂಗಳಲ್ಲಿಯೇ ಮತ್ತೆ ಹೆಡ್ ಮಾಸ್ತರರಲ್ಲಿಗೆ ಹೋದೆ; ಹೊಸತಾಗಿ ಒಂದು ಚಂಡಿನಾಟದ ಬೈಲು ಮಾಡಿದ್ದರು. ನಾಲ್ವತ್ತು ರೂಪಾಯಿಗಳ ಹ್ಯಾಂಡ್ ಪ್ರೆಸ್ಸಿನ ಮೇಲೆ “ಬಕ ಪಕ್ಷಿ” ಎಂಬ ದೈನಿಕ ಪತ್ರವು ಹೊರಡಲನುವಾಗಿತ್ತು, ಪ್ರೊಪ್ರಾಯಿಟರ, ಪಬ್ಲಿಶರ, ಪ್ರಿಂಟರ ಎಲ್ಲವೂ ಬಾಂಬೂಗೌಡ- ಹೆಡ್ ಮಾಸ್ತರರೇ ನಾನು ಹಳ್ಳಿಗೆ ಬಂದ ದಿನವೇ ಅದು "ಔಟ" ಆಗಿತ್ತು: “ತಮ್ಮ, ನಿನ್ನ ಕೈಗುಣದಿಂದ ನನ್ನ ದೈನಿಕಪತ್ರ ಹೊರಬಿತ್ತು.