ಪುಟ:27-Ghuntigalalli.pdf/೧೦

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪ್ರಕಟಿಸಲಾಗಿದೆ

ಮೊದಲ ಮಾತು

______


ನಮ್ಮ ಸಾಮಾಜಿಕ ಜೀವನಕ್ಕೂ, ರಾಜಕೀಯ ಜೀವನಕ್ಕೂ ಇರುವ ನಿಕಟ ಸಂಬಂಧದಿಂದ ನಮ್ಮ ಸಾಹಿತ್ಯವು ಎಂದಿಗೂ ದೂರವಾಗದು, ಆಡಳಿತ ಸರ್ಕಾರಗಳ ನೌಕರರಾಗಿರುವ ಅನೇಕ ಮಂದಿ ಸಾಹಿತ್ಯ ರಂಗಕ್ಕಿಳಿದು, ಗ್ರಂಥಗಳನ್ನು ತಯಾರಿಸಿ ಹಾಕುವ ಒಂದು ಹವ್ಯಾಸ(ಹಾಬಿ) ಇಟ್ಟು ಕೊಂಡಿದ್ದಾರೆ. ಆ ತಯಾರಿಕೆಗಾರರಿಂದ ಕನ್ನಡ ಸಾಹಿತ್ಯಪೇಟೆಯಲ್ಲಿ ದೂಡಲ್ಪಟ್ಟ ಗ್ರಂಥಗಳಲ್ಲಿ ಶೇ.೭೫ರಷ್ಟು ಶಾಲಾ ವಿದ್ಯಾರ್ಥಿಗಳ ಪಠ್ಯ ಪುಸ್ತಕಗಳಾಗಿಯೇ ಮಾರಾಟ ಹೊಂದುವುವು. ಆದ್ದರಿಂದ ಆ ಬಗೆಯ ಪಠ್ಯಪುಸ್ತಕ ಸಾಹಿತ್ಯದಲ್ಲಿ ಸಾಮಾಜಿಕ ಮತ್ತು ರಾಜಕೀಯ ಜಾಗೃತಿಯನ್ನು ಪ್ರಚೋದಿಸುವಂತಹ ಅಂಶಗಳು ಸಾಧಾರಣವಾಗಿ ತಲೆಹಾಕುವ ಸಂಭವವೇ ಇಲ್ಲ. ಇದಕ್ಕೆ ಕಾರಣವಿಷ್ಟೆ:- ವಿದ್ಯಾರ್ಥಿಗಳಲ್ಲಿ ಸ್ವದೇಶಪ್ರೇಮ ಸ್ವಜನಪ್ರೇಮ ಭಾವನೆಗಳು ಮೊಳೆಯುವಂತೆ ಸಾಹಿತ್ಯ ಸೃಷ್ಟಿಸಿ - ಪಠ್ಯ ಪುಸ್ತಕಗಳಾಗಿ ಅವರ ಕೈಯಲ್ಲಿಟ್ಟರೆ ಸ್ವಾತಂತ್ರ್ಯವನ್ನರಸುವ 'ಕೆಟ್ಟ' ದಾಹವೆಲ್ಲಿ ಅವರಲ್ಲಿ ಹುಟ್ಟಿಕೊಳ್ಳುವುದೋ ಎಂಬ ಭೀತಿ, ಮೊದಲನೆಯದು. ಮತ್ತೆ ಆ ಬಗೆಯ ಅನಾಹುತಕ್ಕೆ ಎದೆಗೊಡುವ ಸಾಹಿತ್ಯವನ್ನು ಸೃಷ್ಟಿಸಿ ವಿದ್ಯಾರ್ಥಿಗಳ ಕೈಲಿಟ್ಟುದಕ್ಕಾಗಿ, ತಾವು ನೌಕರಿಯಲ್ಲಿರುವ ಸರ್ಕಾರದ ಆಕ್ರೋಶಕ್ಕೆಲ್ಲಿ ಪಾತ್ರರಾಗುವೆವೊ? ಅಲ್ಲದೆ ಅದರ ಪರಿಣಾಮವಾಗಿ ತಮ್ಮ ನೆಮ್ಮದಿಯ ಜೀವನಕ್ಕೂ, ವೃದ್ಧಾಪ್ಯದ ವೇತನಕ್ಕೂ ಎಲ್ಲಿ ನಂಚಕಾರ ಬಂದೊದಗು ವುದೋ ಎಂಬ ಬೃಹತ್‌ ಭೀತಿ, ಎರಡನೆಯದು, ಹೀಗಾಗಿ ನಮ್ಮಲ್ಲಿ ಹಿರಿಯ ಸಾಹಿತಿಗಳೆನಿಸಿಕೊಂಡವರಿಂದ ನಮಗೆ ದೊರೆತಿರುವುದು, ದೊರೆಯುವುದು ಎಲ್ಲ ಸತ್ವಹೀನ ಸಾಹಿತ್ಯವಾಗಿದೆ.