ಈ ಪುಟವನ್ನು ಪ್ರಕಟಿಸಲಾಗಿದೆ
ತೊಡಕಿನ ಬಾಳು
೯೯
ಹೇಳಿದ ಕಥೆಯಲ್ಲವೆಂದು ನಿಮಗೆ ತಿಳಿದು, ನನಗೆ ಹುಚ್ಚು ಹಿಡಿದಿಲ್ಲವೆಂಬುದು ಖಂಡಿತವಾದರೆ, ಮತ್ತೊಂದು ದಿನ ದಯವಿಟ್ಟು ಬನ್ನಿ. ನನಗೆ ನಿಮ್ಮಿಂದೇನುಪಕಾರವಾಗಬೇಕಾಗಿದೆ ಎನ್ನುವುದನ್ನು ಆಗ ತಿಳಿಸುತ್ತೇನೆ” ಎಂದನು. ಆತನು ನಾನು ಹೊರಕ್ಕೆ ಹೋಗುವವರೆಗೂ ನನ್ನನ್ನೇ ನೋಡುತ್ತ ನಿಂತಿದ್ದನೆಂದು ನನ್ನ ಮನಸ್ಸಿಗೆ ಹೊಳೆಯಿತು. ನಾನೇನೊ ತಿರುಗಿ ಆತನ ಕಡೆ ನೋಡದಿದ್ದರೂ ಆ ಭಾವನೆಯು ಮಾತ್ರ ಬಲವಾಗಿದ್ದಿತು.
ಇನ್ನೂ, ಇಷ್ಟು ದಿನಗಳಾದಮೇಲೂ ನನಗೆ “ ಆತನು ನಿಜವಾಗಿ ಹುಚ್ಚನೇ ಅಲ್ಲವೇ ?” ಎನ್ನುವುದು ಖಂಡಿತವಾಗಿಲ್ಲ. ಆತನು ಎರಡು ದಿನದ ಹಿಂದೆ ಆಸ್ಪತ್ರೆಯಲ್ಲಿ ತೀರಿಹೋದನೆಂದು ವರ್ತಮಾನ ಬಂತು. ಆ ಸುದ್ದಿಯನ್ನು ಕೇಳಿ ಆತನಿಗೆ ನನ್ನಿಂದಾಗಬೇಕಾಗಿದ್ದ ಉಪಕಾರವೇನೆಂಬುದನ್ನು ತಿಳಿಯಬೇಕೆಂದಿದ್ದ ನನ್ನ ಕುತೂಹಲವು ಆಕಸ್ಮಿಕವಾಗಿ ಕೊನೆಗೊಂಡಿತು. “ ಹುಚ್ಚನೇ ಅಲ್ಲವೇ ?” ಎಂಬ ಪ್ರಶ್ನೆಯು ಮಾತ್ರ ಹಾಗೇ ಉಳಿಯಿತು. ಪ್ರಪಂಚದಲ್ಲಿ ಯಾರು ಹುಚ್ಚರು-ಯಾರು ಅಲ್ಲ ?”
ದೇಶಬಂಧು ಪ್ರೆಸ್, ಕೋಟೆ, ಬೆಂಗಳೂರು ಸಿಟಿ.